ಉಡುಪಿ, ಡಿ 22(MSP): ಅಮೆರಿಕಾರದ ಮಿಚಿಗನ್ ಸಿಟಿಯಲ್ಲಿ ಕ್ರಿಕೆಟ್ ಸ್ಟಾರ್ ಆಗಿ ಕರಾವಳಿ ಹುಡುಗನೊಬ್ಬ ಮಿಂಚು ಹರಿಸುತ್ತಿದ್ದಾನೆ. ದೂರದ ದೇಶದಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಈ ಯುವಕ ಉಡುಪಿ ಜಿಲ್ಲೆಯ ಕುಂದಾಪುರದವನು. ಕುಂದಾಪುರದ ಉದ್ಯಮಿ ಕೆ.ಕೆ. ಕಾಂಚನ್ ಮತ್ತು ಶಾಂತಾ ಕಾಂಚನ್ ಅವರ ಪುತ್ರರಾಗಿರುವ ನಿಖಿಲ್ ಕೃಷ್ಣ ಕಾಂಚನ್ ಅಮೆರಿಕದ ಕ್ರಿಕೆಟ್ ಕ್ರೀಡೆಯಲ್ಲಿ ಮಿಂಚುತ್ತಿರುವ ಪ್ರತಿಭೆ. ತನ್ನ ಬಾಲ್ಯದಲ್ಲಿಯೇ ಕ್ರಿಕೆಟ್ ನ ಬಗ್ಗೆ ಒಲವಿದ್ದ ನಿಖಿಲ್ ಇಂದು ಫಿಲ್ಡಿಂಗ್ , ಬ್ಯಾಟಿಂಗ್, ಕೀಪಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ನಲ್ಲಿ ಬಾಲ್ಯದ ವಿದ್ಯಾಬ್ಯಾಸ ಪೂರೈಸಿದ ಕಾಂಚನ್ ಕುಂದಾಪುರದ ಪ್ರಸಿದ್ದ ’ಚಕ್ರವರ್ತಿ ಕ್ರಿಕೆಟ್ ’ ತಂಡದ ಪ್ರದೀಪ್ ಅವರಲ್ಲಿ ತರಬೇತಿ ಪಡೆದು ವಿಕೆಟ್ ಕೀಪಿಂಗ್ನಲ್ಲಿ ಪರಿಣಿತಿ ಪಡೆದರು. ನಂತರ ಪದವಿ ಪೂರ್ವ ಶಿಕ್ಷಣವನ್ನು ನಿಖಿಲ್ ಕೋಟದಲ್ಲಿರುವ ವಿವೇಕ ಜೂನಿಯರ್ ಕಾಲೇಜಿನಲ್ಲಿ ಪಡೆದರು. ಬಳಿಕ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದರು ಇದೇ ಸಂದರ್ಭದಲ್ಲಿ ನಾಲ್ಕು ವರ್ಷ ಬಿಐಟಿ ಕ್ರಿಕೆಟ್ ತಂಡವನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಮುನ್ನಡೆಸಿದ್ದರು. ರಾಜ್ಯದ ಬಿ ಡಿವಿಜನ್ ಲೀಗ್ನಲ್ಲಿ ಉತ್ತಮ ಸಾಧನೆಗೈದಿದ್ದಾರೆ.
ನಂತರ ಎಂಎಸ್ ಸ್ನಾತಕೋತ್ತರ ಪದವಿಯನ್ನು ಅಮೆರಿಕದ ಯುನಿವರ್ಸಿಟಿ ಆಫ್ ಮಿಚಿಗನ್ನಲ್ಲಿ ಪಡೆಯುವ ಸಂದರ್ಭದಲ್ಲೂ ಯುನಿರ್ವಸಿಟಿ ಆಫ್ ಮಿಚಿಗನ್ ಕ್ರಿಕೆಟ್ ತಂಡದ ನಾಯಕರಾಗಿ ಸತತ ಮೂರು ವರ್ಷ ಚಾಂಪಿಯನ್ಷಿಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಸದ್ಯ ಇವರು ಟೆಟ್ರಾಡ್ನಲ್ಲಿ ಪ್ರತಿಷ್ಠಿತ ಫೋರ್ಡ್ ಮೋಟಾರ್ಸ್ನಲ್ಲಿ ಸೀನಿಯರ್ ಡಿಸೈನ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ತಿಂಗಳಷ್ಟೇ ಅಮೆರಿಕದ ಮಿಚಿಗನ್ ರಾಜ್ಯದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ ಮಿಚಿಗನ್ ರಾಜ್ಯ ತಂಡದ ನೇತೃತ್ವ ವಹಿಸಿದ್ದ ನಿಖಿಲ್ ಅದ್ವಿತೀಯ ಸಾಧನೆ ಮಾಡಿ ಎಲ್ಲರಿಂದಲೂ ಶಹಬ್ಬಾಸ್ಗಿರಿ ಪಡೆದಿದ್ದಾರೆ
ಸಾಲು ಸಾಲು ಪ್ರಶಸ್ತಿಗಳು 40 ಓವರ್ಗಳ ಪಂದ್ಯಾವಳಿಯ ಅತ್ಯುತ್ತಮ ಆಟಗಾರ, ಟಿ-20 ಉತ್ತಮ ಆಟಗಾರ, 40 ಓವರ್ಗಳ ಪಂದ್ಯಾವಳಿಯ ಉತ್ತಮ ಬ್ಯಾಟ್ಸ್ಮನ್,ಟಿ-20 ಅತ್ಯುತ್ತಮ ಬ್ಯಾಟ್ಸ್ಮನ್, ಯುಎಸ್ ಕಾರ್ಪೊರೇಟ್ ಕಪ್ನ ಉತ್ತಮ ಟಿ-20 ಆಟಗಾರ, ಉತ್ತಮ ಫೀಲ್ಡರ್, ಡಿಟ್ರಾಯ್ಡ್ ಸೂಪರ್ ಲೀಗ್ನ ಉತ್ತಮ ಬ್ಯಾಟ್ಸ್ಮನ್ ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಗೇರಿಸಿಕೊಂಡಿರುವ ನಿಖಿಲ್ ಅಮೆರಿಕಾದ ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿದ್ದಾರೆ.