ಮಂಗಳೂರು, ಮಾ 26 (DaijiworldNews/DB): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರನ್ನು ಪರೋಕ್ಷವಾಗಿ ರಾಮಾಯಣದಲ್ಲಿರುವ ರಾವಣನ ಪಾತ್ರಕ್ಕೆ ಹೋಲಿಕೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ತಾನು ಭಗವದ್ಗೀತೆ ಮತ್ತು ರಾಮಾಯಣ ಓದಿರುವುದಾಗಿ ಸಿದ್ಧರಾಮಯ್ಯ ಹೇಳಿಕೊಳ್ಳುತ್ತಾರೆ. ರಾವಣ ಕೂಡಾ ಒಬ್ಬಉತ್ತಮ ಸಾಹಿತಿಯಾಗಿದ್ದ. ಇದರರ್ಥ ನಿರ್ದಿಷ್ಟ ಪುಸ್ತಕ ಓದಿದ ಮಾತ್ರಕ್ಕೆ ಆತ ಎಲ್ಲವನ್ನು ತಿಳಿದುಕೊಂಡಿದ್ದಾನೆ ಎಂದರ್ಥವಲ್ಲ. ನಂಬಿಕೆಯಲ್ಲಿ ಮನುಷ್ಯರಿಗೆ ಶ್ರೀರಾಮನೇ ಶ್ರೇಷ್ಠ ಎಂದರು.
ಕಾವಿ ಬೆಂಕಿ ಇದ್ದಂತೆ. ಆ ಬೆಂಕಿಗೆ ಅವರು ಕೈ ಹಾಕಿದ್ದಾರೆ. ಇದರಲ್ಲಿ ಅವರ ರಾಜಕೀಯ ಭವಿಷ್ಯ ಮತ್ತು ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದ ಅವರು, ವೀರಶೈವ ಮತ್ತು ಲಿಂಗಾಯತರನ್ನು ಪ್ರತ್ಯೇಕಿಸುವ ಕೆಲಸ ಮಾಡಿದ ಸಿದ್ದರಾಮಯ್ಯ ಅವರಿಗೆ ಮುಂದೇನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಮಾಂಸಾಹಾರ ಮಾಡಿ ಧರ್ಮಸ್ಥಳಕ್ಕೆ ಹೋದರೆ ಏನು ಎಂಬ ಸವಾಲು ಹಾಕಿ ಮುಖ್ಯಮಂತ್ರಿ ಸ್ಥಾನವನ್ನೇ ತೊರೆಯಬೇಕಾಗಿ ಬಂತು. ಕಾಂಗ್ರೆಸ್ ನೊಳಗೆ ತಲೆದೋರಿರುವ ಆಂತರಿಕ ಕಚ್ಚಾಟವೇ ಸಿದ್ಧರಾಮಯ್ಯ ಈ ರೀತಿಯಾಗಿ ಹೇಳಲು ಕಾರಣ. ಡಿ. ಕೆ. ಶಿವಕುಮಾರ್ ಎದುರು ಮೇಲುಗೈ ಸಾಧಿಸಬೇಕೆಂಬುದು ಅವರ ಉದ್ದೇಶ ಎಂದರು.
ಸಿದ್ದರಾಮಯ್ಯ ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಗಳನ್ನು ಘಾಸಿಗೊಳಿಸುತ್ತಿದ್ದಾರೆ ಎಂದವರು ಇದೇ ವೇಳೆ ಆರೋಪಿಸಿದರು.