ಕೊಲ್ಲೂರು, ಮಾ 26 (DaijiworldNews/MS): ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪುವಿನ ಹೆಸರಿನಲ್ಲಿ ಪ್ರತೀ ದಿನ ನಡೆಯುತ್ತಿರುವ ಸಲಾಂ ಮಹಾಮಂಗಳಾರತಿಯ ಹೆಸರನ್ನು ತೆಗೆಯ ಬೇಕೆಂದು, ಧಾರ್ಮಿಕ ದತ್ತಿ ಇಲಾಖೆ ಹಾಗೂ ಕ್ಷೇತ್ರದ ಆಡಳಿತ ಮಂಡಳಿಗೆ ವಿಶ್ವ ಹಿಂದೂ ಪರಿಷದ್ ಮನವಿ ಸಲ್ಲಿಸಿದೆ.
ಸಲಾಂ ಎಂಬ ಹೆಸರಿನಲ್ಲಿ ಪ್ರತಿ ನಿತ್ಯ ದೇವಿಗೆ ಮಹಾಮಂಗಳಾರತಿಯಾಗುವುದು ಗುಲಾಮಗಿರಿಯ ಸಂಕೇತವಾಗಿದೆ. ಆದರಿಂದ ತಕ್ಷಣ ಕ್ಷೇತ್ರದ ವ್ಯವಸ್ಥಾಪನಾ ಮಂಡಳಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸಲಾಂ ಹಸರನ್ನು ತೆಗೆದು ಕೇವಲ ದೇವರ ಹೆಸರಲ್ಲಿ ಮಹಾಮಂಗಳಾರತಿ ಮಾಡಲು ಕ್ರಮತೆಗೆದುಕೊಳ್ಳಬೇಕೆಂದು ಶ್ರೀಕ್ಷೇತ್ರದ ಕೋಟ್ಯಂತರ ಭಕ್ತರ ಪರವಾಗಿ ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಸದಸ್ಯರು ದೇವಾಲಯದ ಅಧಿಕಾರಿಗಳ ಬಳಿ ಆಗ್ರಹಿಸಿದೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಐತಿಹಾಸಿಕ ಹಿನ್ನೆಲೆ ಇರುವ ಪವಿತ್ರ ಕ್ಷೇತ್ರ ಭಾರತದ 108 ಶಕ್ತಿ ಪೀಠಗಳಲ್ಲಿ ಒಂದು. ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ ಆದಿ ಶಂಕರಾಚಾರ್ಯರು ಮೂಕಾಂಬಿಕಾ ತಾಯಿಯನ್ನು ಇಲ್ಲಿ ನೆಲೆಗೊಳಿಸಿದ್ದಾರೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ಒಬ್ಬ ಕ್ರೂರಿ, ಮತಾಂಧ, ಹಿಂದೂ ವಿರೋಧಿ, ಕನ್ನಡ ವಿರೋಧಿ ಸಾವಿರಾರು ಹಿಂದುಗಳನ್ನು ನರಮೇಧ ಮಾಡಿ, ನೂರಾರು ದೇವಸ್ಥಾನಗಳನ್ನು ದ್ವಂಸಗೊಳಿಸಿದಂತಹ ಟಿಪ್ಪುವಿನ ಹೆಸರಿನಲ್ಲಿ ಪ್ರತೀ ದಿನ ರಾತ್ರಿ 8 ಗಂಟೆಗೆ ದೇವಿ ಮೂಕಾಂಬಿಕೆಗೆ ಸಲಾಂ ಎಂಬ ಹೆಸರಿನಲ್ಲಿ ಮಹಾಮಂಗಳಾರತಿಯಾಗುವುದು ಕ್ಷೇತ್ರದ ಪಾವಿತ್ರತೆಗೆ ಧಕ್ಕೆ ತರುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಶ್ರೀ ಕ್ಷೇತ್ರಕ್ಕೆ 1765ರಿಂದ 1795ರ ನಡುವೆ ಟಿಪ್ಪು ಸುಲ್ತಾನ್ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದ ನೆನಪಿನಲ್ಲಿ ನಿತ್ಯ ಕೊಲ್ಲೂರು ದೇವಾಲಯದಲ್ಲಿ ಸಲಾಂ ಮಂಗಳಾರತಿ ನಡೆಯುತ್ತಿದೆ. ಪ್ರತಿ ದಿನ ರಾತ್ರಿ 8 ರಿಂದ 8:15ರ ನಡುವೆ ಪರಿವಾರ ದೇವತೆಗಳ ಪೂಜೆ ಬಳಿಕ ನಡೆಯುವ ಮಂಗಳಾರತಿ (ಸುತ್ತು ಸಲಾಂ) ಪೂಜೆಗೆ ಸಲಾಂ ಮಂಗಳಾರತಿ ಎನ್ನುವ ಹೆಸರು ಉಳಿದಿದೆ.