ಮಂಗಳೂರು, ಮಾ 26 (DaijiworldNews/MS): ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಮಹಿಳೆ ದಾರುಣ ಸಾವನ್ನಪ್ಪಿದ ಘಟನೆ ರಾ.ಹೆ. 66 ರ ಕಾಪಿಕಾಡು ಎಂಬಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಎಮಿಲ್ಡಾ ಡಿಸೋಜ (59) ಎಂದು ಗುರುತಿಸಲಾಗಿದೆ. ಇವರು ತೊಕ್ಕೊಟ್ಟು ಸಮೀಪದ ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ಬಳಿಯ ಪ್ರತಿಷ್ಠಿತ ಜಾನ್ ಬೇಕರಿ ಕುಟುಂಬದ ಸದಸ್ಯೆ ಎಂದು ತಿಳಿದುಬಂದಿದೆ.
ಇಂದು ಮೊಮ್ಮಗಳ ಹುಟ್ಟುಹಬ್ಬವಿದ್ದು ಅದೇ ಖುಷಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ತೊಕ್ಕೊಟ್ಟು ಚರ್ಚ್ ಗೆ ತೆರಳಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಹಿಂತಿರುಗಿದ್ದರು. ಅರ್ಧ ದಾರಿಯ ವರೆಗೂ ಸಂಬಂಧಿಕರ ಜತೆಗೆ ನಡೆದುಕೊಂಡೇ ಬರುತ್ತಿದ್ದ ಅವರನ್ನ ಪರಿಚಯಸ್ಥ ಮಹಿಳೆ ತನ್ನ ಆಕ್ಟಿವಾ ಸ್ಕೂಟರಿಗೆ ಹತ್ತಿಸಿದ್ದಾರೆ.
ಸ್ಕೂಟರ್ ಕಾಪಿಕಾಡು ರಾಜ್ ಕೇಟರರ್ಸ್ ಬಳಿ ತಲುಪುತ್ತಿದ್ದಂತೆ ಹಿಂದಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದ್ದು ಹಿಂಬದಿ ಸವಾರೆ ಎಮಿಲ್ಡ ಅವರು ರಸ್ತೆಗೆಸೆಯಲ್ಪಟ್ಟಿದ್ದಾರೆ. ತಕ್ಷಣ ಅವರನ್ನ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ದಾರುಣ ಸಾವನ್ನಪ್ಪಿದ್ದಾರೆ.
ಹಿಟ್ ಆಂಡ್ ರನ್ ನಡೆಸಿದ ಕಾರಿನ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.