ಮಂಗಳೂರು, ಮಾ 26 (DaijiworldNews/MS): ಅಣಕು ಕಾರ್ಯಾಚರಣೆಗಳಲ್ಲಿ ಭಾಗವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ದೈಹಿಕ ಹಾಗೂ ಮಾನಸಿಕವಾಗಿ ಸಮರ್ಥರಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಅವರು ಅಭಿಪ್ರಾಯಪಟ್ಟರು.
ಅವರು ಮಾ.25ರ ಶುಕ್ರವಾರ ಮುಡಿಪು ಗ್ರಾಮದ ಪಜೀರು ಶಾಲಾ ಆವರಣದಲ್ಲಿ ಗೇಲ್ ಇಂಡಿಯಾ ಲಿಮಿಟೆಡ್ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗ್ಯಾಸ್ ಸೋರಿಕೆಯಾದಾಗ ಕೈಗೊಳ್ಳಬೇಕಾದ ಸಾರ್ವಜನಿಕರು ಹಾಗೂ ಗೇಲ್ ಇಂಡಿಯಾ ಕಂಪನಿಯವರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಅಣಕು ಪ್ರದರ್ಶನವನ್ನು ವೀಕ್ಷಿಸಿ ಮಾತನಾಡಿದರು.
ನಿರಂತರವಾಗಿ ಅಣಕು ಪ್ರದರ್ಶನಗಳನ್ನು ಹಮ್ಮಿಕೊಳ್ಳುವುದು ಉತ್ತಮ ಅಭ್ಯಾಸ, ಗೇಲ್ ಇಂಡಿಯಾ ಸಂಸ್ಥೆಯ ಸಿಬ್ಬಂದಿಗಳು ಇನ್ನಷ್ಟು ತರಬೇತಿ ಪಡೆಯಬೇಕೆಂದು ಅಭಿಪ್ರಾಯಪಟ್ಟ ಅವರು, ಅನಿಲ ಸೋರಿಕೆಯಾದಾಗ ಗೇಲ್ ಇಂಡಿಯಾ ಹಾಗೂ ಜಿಲ್ಲಾಡಳಿತದಿಂದ ಸಾರ್ವಜನಿಕರ ರಕ್ಷಣೆಗೆ ವಹಿಸುವ ಕ್ರಮಗಳ ಬಗ್ಗೆ ತಿಳಿಸಿಕೊಡುವುದು ಇದರ ಮುಖ್ಯ ಉದ್ದೇಶವಾಗಿತ್ತು ಎಂದರು.
ಈ ಮಾರ್ಗದಲ್ಲಿ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ಲೈನ್ ಹಾದೂ ಹೋಗಿದ್ದು, ಈ ಪರಿಸರದಲ್ಲಿ ಎಲ್ಲೇ ಅನಿಲ ಸೋರಿಕೆ ಅಥವಾ ಅನಿಲ ಪೂರೈಕೆಯಲ್ಲಿ ಅಡಚಣೆಯುಂಟಾದರೆ ಕೂಡ ಕ್ಷಣ ಮಾತ್ರದಲ್ಲಿ ಆ ಬಗ್ಗೆ ಬೆಂಗಳೂರು, ನೋಯ್ಡಾ ಮತ್ತು ಕೊಚ್ಚಿಯಲ್ಲಿರುವ ಮುಖ್ಯ ಸಂಸ್ಥೆಗಳಿಗೆ ಮಾಹಿತಿ ರವಾನೆಯಾಗುತ್ತದೆ ಹಾಗೂ ಕೆಲವೇ ಕ್ಷಣಗಳಲ್ಲಿ ಅನಿಲ ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಮುಂದಾಗುವ ಅಪಾಯವನ್ನು ತಪ್ಪಿಸಲಾಗುತ್ತದೆ, ಈ ವಿಚಾರಗಳನ್ನು ಈ ಅಣಕು ಪ್ರದರ್ಶನದಲ್ಲಿ ತಿಳಿಸಿಕೊಡಲಾಗುತ್ತದೆ ಎಂದು ಹೇಳಿದರು.
ಈ ಯೋಜನೆ ಸಾರ್ವಜನಿಕರ ಆಸ್ತಿ. ಅದೇ ರೀತಿ ಅವುಗಳಿಂದಾಗುವ ಅಡಚಣೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು ನಾಗರೀಕರ ಕರ್ತವ್ಯವೂ ಆಗಿದೆ. ಅಮೇರಿಕಾ, ಪಾಕಿಸ್ತಾನ ಸೇರಿದಂತೆ ಇತರೆ ದೇಶಗಳಲ್ಲಿ ಈ ಯೋಜನೆಗಳು ಬೃಹತ್ ಗಾತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನಮ್ಮ ದೇಶದಲ್ಲೂ ಕೂಡ ಇದು ಅನುಷ್ಠಾನವಾಗುತ್ತಿದೆ ಎಂಬುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಕಾರ್ಖಾನೆಗಳ ಉಪ ನಿರ್ದೇಶಕ ರಾಜೇಶ್ ಮಿಶ್ರಕೋಟಿ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ವಿಜಯ್ ಕುಮಾರ್ ಪೂಜಾರ್, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ನವಾಜ್, ಭರತ್, ಗೇಲ್ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿದ್ದರು.