ಬೆಂಗಳೂರು, ಡಿ 22(MSP):ರಾಜ್ಯ ಸಮ್ಮಿಶ್ರ ಸರಕಾರದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಶನಿವಾರ ಸಂಜೆ 5:20ಕ್ಕೆ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸರ್ಕಾರ ರಚನೆಯಾಗಿ ಆರು ತಿಂಗಳ ಬಳಿಕ ಹಾಗೂ 2019ರ ಲೋಕಸಭೆ ಚುನಾವಣೆಗೆ ೬ ತಿಂಗಳಿರುವಂತೆ ಮಧ್ಯಂತರದಲ್ಲಿ ಮೈತ್ರಿ ಸರ್ಕಾರ ಸಚಿವ ಸಂಪುಟ ವಿಸ್ತರಣೆಗೆ ಹಾಗೂ ಪುನರ್ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಕಾಂಗ್ರೆಸ್ ಕೋಟಾದಲ್ಲಿ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಹಾಗೂ ಆರ್. ಶಂಕರ್ ಅವರನ್ನು ಕೈಬಿಟ್ಟು ಖಾಲಿಯಾಗುವ 8 ಸ್ಥಾನವನ್ನು ಭರ್ತಿ ಮಾಡುವ ನಿರ್ಧಾರವನ್ನು ಮಾಡಲಾಗಿದೆ.
ಹೀಗಾಗಿ ಮಂತ್ರಿಗಿರಿಯನ್ನು ಶಾಸಕರಾದ ಸಿ.ಎಸ್ ಶಿವಳ್ಳಿ –ಕುಂದಗೋಳ, ಎಂಟಿಬಿ ನಾಗರಾಜ್-ಹೊಸಕೋಟೆ, ಪಿ.ಟಿ.ಪರಮೇಶ್ವರ್ ನಾಯ್ಕ್-ಹೂವಿನಹಡಗಲಿ, ರಹೀಂ ಖಾನ್-ಬೀದರ್, ಎಂ.ಬಿ. ಪಾಟೀಲ್ –ಬಬಲೇಶ್ವರ, ಸತೀಶ್ ಜಾರಕಿಹೊಳಿ –ಯಮನಕರಡಿ, ಇ. ತುಕಾರಾಂ –ಸಂಡೂರು ಮತ್ತು ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ್ ಇವರು ಪಡೆದುಕೊಳ್ಳುವ ಸಾಧ್ಯತೆ ಇದೆ.
ಇಂದು ಸಂಜೆ 5.20 ಕ್ಕೆ ರಾಜಭವನದ ಗಾಜಿನಮನೆಯಲ್ಲಿ ನೂತನ ಸಚಿವರ ಪ್ರಮಾಣವಚನ ನಡೆಯಲಿದೆ.