ಪುತ್ತೂರು, ಮಾ 25 (DaijiworldNews/DB): ಕೇರಳ ಮತ್ತು ಕರ್ನಾಟಕದಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಅಂತಾರಾಜ್ಯ ಕಳ್ಳರಿಬ್ಬರನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಲ್ನಾಡು ಗ್ರಾಮದ ಉಜ್ರುಪಾದೆಯ ಮನೆಯೊಂದರಿಂದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಬಂಧಿತ ಆರೋಪಿಗಳನ್ನು ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ಮಹಮ್ಮದ್ ಅಶ್ರಫ್ ಯಾನೆ ಕಳ್ಳ ಆಶ್ರಫ್ (42) ಮತ್ತು ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಕೆರೆಮೂಲೆ ಮೂಲದ ಕೆ. ಮೊಹಮ್ಮದ್ ಸಲಾಂ ಎಂದು ಗುರುತಿಸಲಾಗಿದೆ.
ಬಲ್ನಾಡು ಉಜ್ರುಪಾದೆ ಶಿವಪ್ರಸಾದ್ ಭಟ್ ಅವರ ಮನೆಯ ಬೀಗ ಒಡೆದು ಫೆ. 26 ರಂದು ಸುಮಾರು 160 ಗ್ರಾಂ ಚಿನ್ನಾಭರಣ ಕಳವಾಗಿದ್ದ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರು ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಬ್ಬರು ಕೇರಳ ಮತ್ತು ಕರ್ನಾಟಕದ ಅನೇಕ ಕಡೆ ಕಳ್ಳತನ ಮಾಡಿದ್ದು, ಉಪ್ಪಿನಂಗಡಿ, ಸುಳ್ಯ, ಬೆಳ್ಳಾರೆ, ಪುತ್ತೂರು ನಗರ, ಧರ್ಮಸ್ಥಳ, ಬಂಟ್ವಾಳ, ವಿಟ್ಲ, ಕೇರಳದ ಮಲ್ಲಪುರಂ ಕೊಂಡೆಟ್ಟಿ, ಆದೂರು, ಕೊಡಗಿನ ಸೊಮವಾರಪೇಟೆ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಅಲ್ಲದೆ ಆರೋಪಿಗಳ ಪತ್ತೆಗೆ ವಾರಂಟ್ ಕೂಡಾ ಜಾರಿಯಾಗಿತ್ತು. ಆದರೆ ಇಬ್ಬರೂ ತಲೆಮರೆಸಿಕೊಂಡಿದ್ದರು.
ಬಂಧಿತ ಆರೋಪಿಗಳಿಂದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ಸಿಸಿ ಕ್ಯಾಮರ ಡಿವಿಆರ್, ಲ್ಯಾಪ್ಟಾಪ್ ಮತ್ತು ಕಳ್ಳತನಕ್ಕೆ ಉಪಯೋಗಿಸಿದ ಬೈಕ್ ಸೇರಿದಂತೆ ಒಟ್ಟು 6.5 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಿಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದಾಗ ವಿವಿಧೆಡೆ ಕಳ್ಳತನ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಪುಣಚ ಗ್ರಾಮದ ಅಜ್ಜನಡ್ಕ ಮಹಮ್ಮದ್ ಆಲಿ ಅವರ ಮನೆ, ಬಲ್ನಾಡು ಗ್ರಾಮದ ವಿಷ್ಣುಮೂರ್ತಿ ದೈವಸ್ಥಾನ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕಾವು ಸಿರಿ ಭೂಮಿ ಕೃಷಿ ಉತ್ಪನ್ನ ಅಂಗಡಿ ಮಾತ್ರವಲ್ಲದೆ, ಭಟ್ಕಳ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ, ಕಾಸರಗೋಡು ಚೆರ್ಕಳದಲ್ಲಿ ಎರಡು ಮನೆಗಳಿಂದ ಕಳ್ಳತನ ಮಾಡಿರುವ ಕುರಿತು ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ, ಹೆಚ್ಚುವರಿ ಪೊಲೀಸು ಅಧೀಕ್ಷಕ ಕುಮಾರ ಚಂದ್ರ ಅವರ ಮಾರ್ಗದರ್ಶನದಲ್ಲಿ ಪುತ್ತೂರು ಡಿವೈಎಸ್ಪಿ ಡಾ| ಗಾನ ಪಿ.ಕುಮಾರ್ ಅವರ ನೇತೃತ್ವದಲ್ಲಿ, ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಉಮೇಶ್ ಯು., ಸಂಪ್ಯ ಪೊಲೀಸ್ ಠಾಣೆ ಎಸ್.ಐ ಉದಯರವಿ ಎಂ. ಪೈ, ಎಸ್.ಐ ಅಮೀನ್ ನಾಬ್ ಅತ್ತಾರ್ ಮತ್ತು ವಿಶೇಷ ತಂಡದ ಸಿಬಂದಿಗಳಾದ ಪ್ರವೀಣ್ ರೈ ಪಾಲ್ತಾಡಿ, ಮುರುಗೇಶ್, ಶಿವರಾಮ ಗೌಡ, ಧರ್ಣಪ್ಪ ಗೌಡ, ವರ್ಗಿಸ್, ಕೃಷ್ಣಪ್ಪ ಗೌಡ, ದೇವರಾಜ್ ಗಾಯತ್ರಿ ಮತ್ತು ಜಿಲ್ಲಾ ಗಣಕ ಯಂತ್ರ ವಿಭಾಗದ ಸಂಪತ್, ದಿವಾಕರ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ತಿಂಗಳೊಳಗೆ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸಿ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಹುಮಾನವನ್ನು ಘೋಷಿಸಿದ್ದಾರೆ.