ಕುಂದಾಪುರ, ಮಾ 25 (DaijiworldNews/MS): ಪುರಾಣ ಹಾಗೂ ಇತಿಹಾಸ ಪ್ರಸಿದ್ದವಾದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವೈಭವದ ಶ್ರೀ ಮನ್ಮಹಾರಥೋತ್ಸವ ಶುಕ್ರವಾರ ವೈಭವದಿಂದ ಸಂಪನ್ನಗೊಂಡಿತು. ಶ್ರೀ ದೇವಿಯ ವಿಜ್ರಂಭಣೆಯ ಉತ್ಸವಕ್ಕೆ ದೇಶದ ವಿವಿಧ ಭಾಗಗಳಿಂದ ಬಂದಿದ್ದ ದೊಡ್ಡ ಸಂಖ್ಯೆಯ ಭಕ್ತರು ಸಾಕ್ಷಿಗಳಾದರು.
ಬೆಳಿಗ್ಗೆಯ ಧಾರ್ಮಿಕ ವಿಧಿ ಆಚರಣೆಯ ಬಳಿಕ ದೇವಸ್ಥಾನ ಮುಂಭಾಗದಲ್ಲಿ ಇರುವ ಬ್ರಹ್ಮ ರಥದಲ್ಲಿ ದೇವರನ್ನು ಕುಳ್ಳಿರಿಸಿ ಬೀದಿ ಗಣಪತಿ ದೇವಸ್ಥಾನದವರೆಗೆ ರಥವನ್ನು ಎಳೆದು ರಥಾರೋಹಣ ಉತ್ಸವ ನಡೆಸಲಾಯಿತು. ಸಂಜೆಯ ಬಳಿಕ ಬ್ರಹ್ಮರಥದಲ್ಲಿ ದೇವರನ್ನು ಕುರಿಸಿ ರಥ ಬೀದಿಯಲ್ಲಿ ಬ್ರಹ್ಮ ರಥವನ್ನು ಶಂಕರಾಶ್ರಮದ ವರೆಗೆ ಎಳೆಯುವ ಮೂಲಕ ರಥಾವರೋಹಣ ಉತ್ಸವವನ್ನು ನಡೆಸಲಾಯಿತು. ರಾಜ್ಯದಲ್ಲಿ ನಡೆಯುತ್ತಿರುವ ಉತ್ಸವ ಆಚರಣೆಗಳಿಗೆ ಕೋವಿಡ್-19 ರ ಮಾರ್ಗಸೂಚಿ ಇದ್ದರೂ, ಶುಕ್ರವಾರ ನಡೆದ ರಥೋತ್ಸವದಲ್ಲಿ ಭಾಗಿಯಾಗಿದ್ದ ಸಾವಿರಾರು ಸಂಖ್ಯೆ ಮೂಕಾಂಬಿಕಾ ದೇವಿಯ ಭಕ್ತರು, ಯಾವುದೇ ಮಾರ್ಗಸೂಚಿಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಉತ್ಸವದಲ್ಲಿ ಭಾಗಿಯಾಗಿದ್ದರು.
ಮಾ.18 ರಂದು ಗಣಪತಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಶ್ರೀ ಕ್ಷೇತ್ರದ ವಾರ್ಷಿಕ ಉತ್ಸವಾಚರಣೆಯ ಅಂಗವಾಗಿ ಪ್ರತಿ ದಿನವೂ ವಿಶೇಷ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಾ.19 ರಂದು ಮಾಂಗಲ್ಯೋತ್ಸವ ಮಯೂರಾರೋಹಣೋತ್ಸವ, ಮಾ.20 ರಂದು ಡೋಲಾರೋಹಣೋತ್ಸವ, ಮಾ.21 ರಂದು ಪುಷ್ಪಮಂಟಪಾರೋಹಣೋತ್ಸವ, ಮಾ.22 ರಂದು ವೃಷಭಾರೋಹಣೋತ್ಸವ, ಮಾ.23 ರಂದು ಗಜಾರೋಹಣೋತ್ಸವ, ಮಾ.24 ರಂದು ಸಿಂಹಾರೋಹಣೋತ್ಸವ, ಮಾ.25 ರ ಶುಕ್ರವಾರದಂದು ಮಧ್ಯಾಹ್ನ ರಥಾರೋಹಣ ಹಾಗೂ ಸಂಜೆ 5 ಕ್ಕೆ ರಥಾವರೋಹಣ ನಡೆದಿದೆ.
ದೇವಸ್ಥಾನದ ತಂತ್ರಿ ರಾಮಚಂದ್ರ ಅಡಿಗ ಅವರ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ಹಾಗೂ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಅರ್ಚಕರಾದ ಎನ್.ಗೋವಿಂದ ಅಡಿಗ, ಎನ್.ಸುಬ್ರಮಣ್ಯ ಅಡಿಗ, ವಿಘ್ನೇಶ್ವರ ಅಡಿಗ, ಸುರೇಶ್ ಭಟ್ ಇದ್ದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ ಮಹೇಶ್, ಸಹಾಯಕ ಕಾರ್ಯನಿವರ್ಹಣಾಧಿಕಾರಿ ಗೋವಿಂದ ನಾಯ್ಕ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಗೋಪಾಲಕೃಷ್ಣ ನಾಡ, ಡಾ.ಅತುಲಕುಮಾರ ಶೆಟ್ಟಿ, ಜಯಾನಂದ ಹೋಬಳಿದಾರ್, ಬೆಳ್ವೆ ಗಣೇಶ್ ಕಿಣಿ, ರತ್ನಾ ರಮೇಶ್ ಕುಂದರ್, ಕೆ.ಪಿ.ಶೇಖರ್, ಸಂಧ್ಯಾ ರಮೇಶ್, ಮಾಜಿ ಸದಸ್ಯರಾದ ಚುಚ್ಚಿ ನಾರಾಯಣ ಶೆಟ್ಟಿ, ವಂಡಬಳ್ಳಿ ಜಯರಾಮ್ ಶೆಟ್ಟಿ, ರಮೇಶ್ ಗಾಣಿಗ ಕೊಲ್ಲೂರು ಇದ್ದರು.
ಅನ್ಯಮತೀಯರ ಅಂಗಡಿಗಳಿಲ್ಲ :
ಇಂದು ನಡೆದ ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನದ ರಥ ಬೀದಿ ಹಾಗೂ ಆಸು-ಪಾಸುಗಳಲ್ಲಿ ಹಿಂದೂ ಧರ್ಮೀಯರನ್ನು ಹೊರತು ಪಡಿಸಿ, ಬೇರೆ ಧರ್ಮದವರು ಯಾರು ಅಂಗಡಿ-ಮಳಿಗೆಗಳನ್ನು ತೆರದಿರಲಿಲ್ಲ.
ಜಾತ್ರೆಗಾಗಿ ಅನುಮತಿ ಕೇಳಿಕೊಂಡು ಬಂದಿದ್ದ ಕೆಲ ಅನ್ಯ ಧರ್ಮೀಯರಿಗೆ, ಪಂಚಾಯಿತಿಗೆ ನೀಡಿರುವ ಮನವಿಯ ಕುರಿತು ಮಾಹಿತಿ ನೀಡಿ, ಸಾಮಾಜಿಕ ಶಾಂತಿಗಾಗಿ ಮನವಿ ಮಾಡಿದ್ದರಿಂದ, ಅದಕ್ಕೆ ಸ್ಪಂದಿಸಿದ್ದ ಅವರುಗಳು ಅಂಗಡಿ ಹಾಕಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಬೈಂದೂರು ಸರ್ಕಲ್ ಇನ್ಸಪೆಕ್ಟರ್ ಸಂತೋಷ ಕಾಯ್ಕಿಣಿ, ಉಪ ನಿರೀಕ್ಷಕರುಗಳಾದ ಶ್ರೀಧರ ನಾಯಕ್, ಸದಾಶಿವ ಗವರೋಜಿ, ಈರಣ್ಣ ಶಿರಗುಪ್ಪಿ ಅವರ ನೇತ್ರತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.