ಬಂಟ್ವಾಳ, ಮಾ 25 (DaijiworldNews/MS): ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ರೋಟರಿ ಕ್ಲಬ್ ಮೊಡಂಕಾಪು ಮತ್ತು ಸ್ತ್ರೀ ಸಂಘಟನೆ ಬಂಟ್ವಾಳ ಜಂಟಿಯಾಗಿ ಆಯೋಜಿಸಿದ ಮಹಿಳೆಯರಿಗಾಗಿ ಗುಡಿಕೈಗಾರಿಕೆ ಬಗ್ಗೆ ಮಾಹಿತಿ ಮತ್ತು ತರಬೇತಿ ಶಿಬಿರವು ಇತ್ತೀಚೆಗೆ ಅನುಗೃಹ ಸಭಾಂಗಣ ಮೊಡಂಕಾಪಿನಲ್ಲಿ ನಡೆಯಿತು.
ಮುಖ್ಯ ಅಥಿತಿಗಳಾಗಿ ಧರ್ಮ ಗುರುಗಳಾದ ವಂ.ಫಾ.ಫ್ರಾನ್ಸಿಸ್ ಡಿ ಸೋಜ ಮತ್ತು ಉದ್ಘಾಟಕರಾಗಿ ವಂ.ಫಾ.ವೆಲೇರಿಯನ್ ಡಿ ಸೋಜ ಭಾಗವಹಿಸಿದರು. ಮೊಡಂಕಾಪು ರೋಟರಿ ಕ್ಲಬ್ ಅಧ್ಯಕ್ಷ ರೋ.ಇಲಿಯಾಸ್ ಸ್ಯಾಂಕ್ಟಿಸ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಮಂಗಳೂರು ಮತ್ತು ಪುತ್ತೂರು ತಾಲೂಕು ಅಲ್ಪ ಸಂಖ್ಯಾತರ ಇಲಾಖೆಯ ವಿಸ್ತರಣಾಧಿಕಾರಿಗಳಾದ ಮಂಜುನಾಥ ಶೆಟ್ಟಿಯವರು ಅಲ್ಪ ಸಂಖ್ಯಾತ ಇಲಾಖೆಯಿಂದ ಮಹಿಳೆಯರಿಗೆ ಗುಡಿಕೈಗಾರಿಕೆ ನಡೆಸಲು ಇರುವ ಯೋಜನೆಗಳ ವಿವರ ನೀಡಿದರು. ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ದ.ಕ.ಜಿಲ್ಲಾ ಮಹಿಳಾ ಉದ್ಯಮಿಗಳ ಸಬಲೀಕರಣ ನಿರ್ಧೇಶಕರಾದ ಶ್ರೀಮತಿ ಮರ್ಜೆರಿ ಅರಾನ್ಹಾ ವಿವಿಧ ಗುಡಿಕೈಗಾರಿಕೆಗಳನ್ನು ಮಹಿಳೆಯರು ನಡೆಸಿಕೊಂಡು ಹೋಗುವ ಬಗ್ಗೆ ತರಬೇತಿ ನೀಡಿದರು.ವೇದಿಕೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದ ಶ್ರೀಮತಿ ಶೈಲಜಾ ರಾಜೇಶ್ ಮತ್ತು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಚುನಾಯಿತರಾದ ರೋ.ಅರುಣ್ ರೋಶನ್ ಡಿ ಸೋಜ ಇವರನ್ನು ಸನ್ಮಾನಿಸಲಾಯಿತು.
ಸ್ತ್ರೀ ಸಂಘಟನೆಯ ಸದಸ್ಯರು ಮನೋರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯಲ್ಲಿ ರೋಟರಿ 3181 ಜಿಲ್ಲಾ ನಿಯೋಜಿತ ಅಧ್ಯಕ್ಷರಾದ ರೋ.ಪ್ರಕಾಶ ಕಾರಂತ್, ಸ್ತ್ರೀ ಸಂಘಟನೆ ಬಂಟ್ವಾಳ ವಲಯದ ಅಧ್ಯಕ್ಷರಾದ ಅನಿತಾ ನೊರೊನ್ಹಾ ,ಸ್ತ್ರೀ ಸಂಘಟನೆ ಕೇಂದ್ರದ ಅಧ್ಯಕ್ಷ ಗ್ರೆಟ್ಟಾ ಪಿಂಟೋ ಮತ್ತು ರೋಟರಿ ಕ್ಲಬ್ ಕಾರ್ಯದರ್ಶಿ ರೋ.ಪಿ.ಎ.ರಹೀಂ ಉಪಸ್ಥಿತರಿದ್ದರು.
ಸ್ತ್ರೀ ಸಂಘಟನೆಯ ಬಂಟ್ವಾಳ ವಲಯ ಕಾರ್ಯದರ್ಶಿ ಶಾಂತಿ ಫೆರ್ನಾಂಡಿಸ್ ಧನ್ಯವಾದ ಸಮರ್ಪಿಸಿದರು. ಸುಮಾರು 300 ಕ್ಕಿಂತಲೂ ಹೆಚ್ಚು ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಿದ್ದರು. ರೋಟರಿ ಪಧಾಧಿಕಾರಿಗಳು , ಸದಸ್ಯರು ಮತ್ತು ಸ್ತ್ರೀ ಸಂಘಟನೆಯ ವಿವಿಧ ಪಧಾಧಿಕಾರಿಗಳು ಹಾಜರಿದ್ದರು.