ಮಂಗಳೂರು,ಡಿ 22(MSP): ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ವತಿಯಿಂದ ಶುಕ್ರವಾರ ಕಾಲೇಜಿನ 150ನೇ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಗಾಂಧಿ ಮೊಮ್ಮಗ ಪ್ರೊ.ರಾಜ್ಮೋಹನ್ ಗಾಂಧಿ ‘ ಸ್ವರಾಜ್ ಮತ್ತು ಸರ್ವೋದಯ : ಒಂದು ಪುನಾರವಲೋಕನ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಬಳಿಕ ಸಂವಾದ ಕಾರ್ಯಕ್ರಮದಲ್ಲಿ 'ಅಜ್ಜಿ ಕಸ್ತೂರ್ಬಾ ಅವರ ಒಡನಾಟದ ಬಗ್ಗೆ ಹೇಳಿ’ ಎಂಬ ಪ್ರಶ್ನೆಯೊಂದಕ್ಕೆ ಅವರು ಚುಟುಕಾಗಿ ಉತ್ತರಿಸಲು ಹೋಗಿ ಅವರ ಕಣ್ಣಾಲಿಗಳು ತೇವಗೊಂಡಿತ್ತು ಮಾತು ಗದ್ಗತಿತವಾಗಿತ್ತು.
ಅದೆಷ್ಟೋ ಮಹಿಳೆಯರಂತೆಯೇ, ಮಹಾತ್ಮ ಗಾಂಧೀಜಿ ಅವರನ್ನು ನನ್ನ ಅಜ್ಜಿ ಕಸ್ತೂರ್ಬಾ ಅವರು ಹಲವು ಬಾರಿ ಬದುಕಿಸಿದ್ದರು. ಪ್ರೊ.ರಾಜ್ಮೋಹನ್ ಗಾಂಧಿ ಅವರು ಕೈಲಿದ್ದ ಮೈಕ್ಗೆ ಹಣೆಯಾನಿಸಿ ಮೌನವಾದರು.ಬಹಳಷ್ಟು ಹೊತ್ತು ಮೌನವಾಗಿದ್ದ ಅವರ ಕಣ್ಣುಗಳಲ್ಲಿ ನೀರು ಜಿನುಗಿತ್ತು. ಕೋಲ್ಕತ್ತಾದಲ್ಲಿರುವಾಗ ಗಾಂಧೀಜಿ ಹಸುಗಳ ಮೇಲೆ ನಡೆಯುವ ಹಿಂಸೆಯನ್ನು ನೋಡಿ ಹಾಲು ಕುಡಿಯುವುದಿಲ್ಲ ಎಂದು ಪ್ರಮಾಣ ಮಾಡಿದ್ದರು. ಆದರೆಒಂದು ಬಾರಿ ಅವರ ತೀವ್ರವಾಗಿ ಅನಾರೋಗ್ಯ ಕಾಡಿತ್ತು. ಜೀವಕ್ಕೆ ಅಪಾಯವಿರುವ ಕಾರಣ ವೈದ್ಯರು ಹಾಲು ಸೇವಿಸುವಂತೆ ಸಲಹೆ ಮಾಡಿದ್ದರು. ಆದರೆ ಗಾಂಧೀಜಿ ತಮ್ಮ ಪ್ರತಿಜ್ಞೆ ಮುರಿಯಲು ಸಿದ್ಧರಿರಲಿಲ್ಲ. ಕೊನೆಗೆ ಗಾಂಧಿಜಿಯವರನ್ನು ಬದುಕಿಸಲು ‘ಆಡಿನ ಹಾಲನ್ನಾದರೂ ಸೇವಿಸಬಹುದಲ್ಲ’ ಎನ್ನುತ್ತ ಕಸ್ತೂರ್ಬಾ ಪತಿಯನ್ನು ಓಲೈಸುವಲ್ಲಿ ಯಶಸ್ವಿಯಾದರು' ಎನ್ನುವಷ್ಟರಲ್ಲಿ ಅವರ ದುಃಖ ಉಮ್ಮಳಿಸಿ ಬಂದು ಮೌನವಾದರು.