ಮಂಗಳೂರು, ಮಾ 25 (DaijiworldNews/MS): 2025ರ ವೇಳೆಗೆ ದೇಶ ಕ್ಷಯ ಮುಕ್ತವನ್ನಾಗಿಸಲು ವೈದ್ಯರು ಹಾಗೂ ಸಂಬಂಧಿಸಿದ ಇಲಾಖೆಗಳು ಶ್ರಮಿಸಬೇಕು ಎಂದು ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಹೇಳಿದರು.
ಅವರು ಮಾ.24ರ ಗುರುವಾರ ನಗರದ ಕುದ್ಮಲ್ ರಂಗರಾವ್ ಕೊರಗ ಸಮುದಾಯ ಭವನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಟ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿ, ಕೊರಗ ಅಭಿವೃದ್ಧಿ ನಿಗಮ ಹಾಗೂ ದೇರಳಕಟ್ಟೆಯ ಯೆನಪೋಯ ನರ್ಸಿಂಗ್ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಕ್ಷಯ ರೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕ್ಷಯ ಸಾಂಕ್ರಾಮಿಕ ರೋಗ, ಪ್ರಧಾನಮಂತ್ರಿಗಳು ಅದನ್ನು 2025ರ ಹೊತ್ತಿಗೆ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಂಕಲ್ಪ ತೊಟ್ಟಿದ್ದಾರೆ, ಅದನ್ನು ಸಾಕಾರ ಮಾಡಲು ಕಾರ್ಯಕ್ರಮಗಳು ಅಥವಾ ಆಂದೋಲನಗಳನ್ನು ಮಾಡಿದಷ್ಟೂ ಸಾಲುವುದಿಲ್ಲ, ಬದಲಾಗಿ ನಾಗರೀಕರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು ಹಾಗೂ ಪ್ರಜ್ಞಾವಂತರು ಇತರರಿಗೂ ಕ್ಷಯ ರೋಗದ ಮಾಹಿತಿಯನ್ನು ನೀಡಬೇಕು, ಪರಸ್ಪರ ಒಗ್ಗಟ್ಟು ಮತ್ತು ಅರಿವಿನಿಂದ ಮಾತ್ರ ರೋಗ ನಿರ್ಮೂಲನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಕ್ಷಯವು ಶತಮಾನಗಳ ಹಿಂದೆಯೇ ನಾಗರೀಕ ಸಮಾಜವನ್ನು ಆಕ್ರಮಿಸಿಕೊಂಡಿದೆ. ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯರೋಗಿಗಳಿಗೆ ಅಗತ್ಯವಿರುವ ಎಲ್ಲಾ ಸವಲತ್ತುಗಳೂ ಕೂಡ ಉಚಿತವಾಗಿ ದೊರೆಯುತ್ತಿದೆ, ಜತೆಗೆ ಚಿಕಿತ್ಸೆಗೆಂದು ವಿಶೇಷ ಘಟಕಗಳನ್ನು ಕೂಡ ತೆರೆಯಲಾಗಿದೆ. ಪ್ರಧಾನಮಂತ್ರಿಗಳ ಸಂಕಲ್ಪ ಈಡೇರಲು ನಾಗರೀಕರು ರೋಗದ ಲಕ್ಷಣ, ಚಿಕಿತ್ಸಾ ವಿಧಾನ ಮತ್ತು ನಿರ್ಮೂಲನಾ ಕ್ರಮಗಳನ್ನು ಅರಿತುಕೊಂಡು ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದರೆ ಆದಷ್ಟು ಬೇಗ ದೇಶ ಹಾಗೂ ರಾಜ್ಯ ಕ್ಷಯ ಮುಕ್ತವಾಗಲಿದೆ ಎಂದರು.
ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ ಡಾ.ಬದರುದ್ದೀನ್, ಯೆನಪೋಯ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಲೀನಾ ಕೆ.ಸಿ., ಯೆನಪೋಯ ನಸಿರ್ಂಗ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ. ಸಶಿ ಕುಮಾರ್, ವೆನ್ಲಾಕ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ಕಿಶೋರ್ ಬಾಬು, ಐ.ಎಂ.ಎ ಕಾರ್ಯದರ್ಶಿ ಸದಾನಂದ ಪೂಜಾರಿ, ಕೊರಗ ಅಭಿವೃದ್ಧಿ ಸಂಘದ ಅಧ್ಯಕ್ಷೆ ಬೇಬಿ ಪಡೀಲ್ ಸೇರಿದಂತೆ ದೇರಳಕಟ್ಟೆ ಯೆನಪೋಯ ನರ್ಸಿಂಗ್ ಕಾಲೇಜಿನ ವಿಧ್ಯಾರ್ಥಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು