ಬಂಟ್ವಾಳ, ಮಾ. 24 (DaijiworldNews/SM): ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಯ ಅವಧಿಯಲ್ಲಿ ಮೆಲ್ಕಾರ್ ನಲ್ಲಿ ಕುಡಿಯವ ನೀರಿನ ಪೈಪ್ ಲೈನ್ ಹಾನಿಯಾದ ಬಗ್ಗೆ ಹಾಗೂ ಸಮಸ್ಯೆ ಪರಿಹಾರಕ್ಕೆ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಹಾಗೂ ಪುರಸಭೆ ಇಲಾಖೆ ಮತ್ತು ಜನಪ್ರತಿನಿಧಿಗಳ ಜೊತೆ ವಿಶೇಷ ಸಭೆ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಆವರ ಅಧ್ಯಕ್ಷತೆಯಲ್ಲಿ ಗುರುವಾರ ಬೆಳಿಗ್ಗೆ ಪುರಸಭಾ ಇಲಾಖೆಯ ಕಚೇರಿಯಲ್ಲಿ ನಡೆಯಿತು.
ಮೆಲ್ಕಾರ್ ಭಾಗದಲ್ಲಿ ಕಾಮಗಾರಿಯ ವೇಳೆ ಪೈಪ್ ಲೈನ್ ಗೆ ಹಾನಿಯಾದರೆ ಎಲ್ಲವನ್ನು ಹೆದ್ದಾರಿ ಇಲಾಖೆಯ ವತಿಯಿಂದಲೇ ದುರಸ್ತಿ ಆಗಬೇಕು, ಸಮಸ್ಯೆ ಎದುರಾದರೆ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಹೆದ್ದಾರಿ ಅಧಿಕಾರಿಗೆ ಎಚ್ಚರಿಕೆ :
ಸಭೆಯಲ್ಲಿ ಚರ್ಚೆಯಾದ ವಿಚಾರಗಳನ್ನು ಮೇಲಾಧಿಕಾರಿಗಳಿಗೆ ವರದಿ ಒಪ್ಪಿಸುವ ಕಾರ್ಯ ಮಾಡಿದರೆ ಸಾಲದು , ಅಗತ್ಯವಾಗಿ ಅಲ್ಲಿನ ಸಮಸ್ಯೆ ಗಳಿಗೆ ಪರಿಹಾರ ಮಾಡುವ ಕೆಲಸ ಮಾಡಿ, ಇಲ್ಲದಿದ್ದರೆ ನಾನೇ ಮುಂಚೂಣಿ ಯಲ್ಲಿ ನಿಂತು ಜನಪ್ರತಿನಿಧಿಗಳು ಹಾಗೂ ಅಲ್ಲಿನ ಸಾರ್ವಜನಿಕರ ಜೊತೆ ಗುತ್ತಿಗೆದಾರರ ವಿರುದ್ಧ ಪ್ರತಿಭಟನೆ ನಡೆಸಿ , ಕಾಮಗಾರಿ ನಿಲ್ಲಿಸಲು ಒತ್ತಾಯ ಮಾಡುವುದಾಗಿ ಅವರು ಎಚ್ಚರಿಸಿದರು. ಕಾಮಗಾರಿಯ ವೇಳೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಂಸದ ಹಾಗೂ ಶಾಸಕರಿಗೂ ಮಾಹಿತಿ ನೀಡಿದ್ದೇವೆ. ಸ್ಥಳೀಯ ಇಲಾಖೆಯನ್ನು ವಿಶ್ವಾಸ ಕ್ಕೆ ತೆಗೆದುಕೊಂಡು ಕಾಮಗಾರಿ ನಡೆಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆದ್ದಾರಿ ಕಾಮಗಾರಿ ಆರಂಭವಾಗುವ ಮುನ್ನವೆ ಮೂರು ಎಸ್ಟೆಮೇಟ್ ಗಳನ್ನುಇಲಾಖೆಗೆ ಕೊಟ್ಟಿದ್ದೇನೆ, ಅಬಳಿಕ ಹಲವಾರು ಗುತ್ತಿಗೆದಾರರು ಬದಲಾಗಿ ಪ್ರಸ್ತುತ ಕೆ.ಎನ್.ಆರ್.ಸಿ.ಕಂಪೆನಿ ಗುತ್ತಿಗೆ ವಹಿಸಿದೆ, ಕಂಪೆನಿ ಈ ಕೆಲಸ ಮಾಡಬೇಕು ಹೊರತು ಒಳಚರಂಡಿ ಇಲಾಖೆಗೆ ಅದು ಅನ್ವಯಿಸುವುದಿಲ್ಲ , ಆದರೆ ಸಾರ್ವಜನಿಕರಿಗೆ ಗೆ ತಪ್ಪು ಮಾಹಿತಿ ನೀಡಲಾಗಿದೆ ಒಳಚರಂಡಿ ಇಲಾಖೆಯ ಇಂಜಿನಿಯರ್ ಶೋಭಾ ಲಕ್ಷ್ಮೀ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಪುರಸಭೆ ಇಲಾಖೆ ಹಾಗೂ ಅಧಿಕಾರಿಗಳ ಸಂಪೂರ್ಣ ಸಹಕಾರ ಇದೆ, ಆದರೆ ಕಾಮಗಾರಿಯ ವೇಳೆ ಪುರಸಭೆಗೆ ಯಾವುದೇ ಮಾಹಿತಿ ನೀಡದೆ ಪುರಸಭೆಯ ನೀರಿನ ಪೈಪ್ ಗಳಿಗೆ ಹಾನಿಯಾಗುವಂತೆ ಮಾಡಿದ್ದಲ್ಲದೆ, ಸಾರ್ವಜನಿಕ ರ ಕುಡಿಯುವ ನೀರಿಗೆ ತೊಂದರೆ ನೀಡಿದ್ದು ಸರಿಯಾ?, ಪುರಸಭಾ ಇಲಾಖೆಗೆ ಸೇರಿದ ಹಳೆಯ ಪೈಪ್ ಲೈನ್ ಗಳನ್ನು ವರ್ಗಾವಣೆ ಮಾಡಿ ಹೊಸ ಪೈಪ್ ಲೈನ್ ಅಳವಡಿಸಿಕೊಡಿ ಎಂದು ಪುರಸಭಾ ಸದಸ್ಯ ಮಹಮ್ಮದ್ ಸಿದ್ದೀಕ್ ಇಂಜಿನಿಯರ್ ಗೆ ತಿಳಿಸಿದರು.