ಉಡುಪಿ, ಮಾ. 24 (DaijiworldNews/SM): ಕರಾವಳಿಯಲ್ಲಿ ಪ್ರಸಿದ್ದಿ ಪಡೆದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಕಾರ್ಯಗಳು ಸಂಪನ್ನಗೊಂಡಿದ್ದು ಶಿಲೆದಾರು ಶಿಲ್ಪಗಳಿಂದ ಕೂಡಿದ ದೇವಾಲಯದಲ್ಲಿ ಶ್ರೀ ಪ್ರಸನ್ನ ಗಣಪತಿ, ಶ್ರೀ ಭದ್ರಕಾಳಿ, ಶ್ರೀ ನಾಗದೇವರ ಸಹಿತ ಶ್ರೀ ಮಹಾಲಕ್ಷ್ಮಿ ದೇವಿಯ ಬಿಂಬ ಪುನರ್ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ರಥೋತ್ಸವ, ಚತುಃಪವಿತ್ರ ನಾಗಮಂಡಲೋತ್ಸವಗಳನ್ನೊಳಗೊಂಡ ವೈಧಿಕ ವಿಧಿ ವಿಧಾನಗಳನ್ನು ಇದೇ ಬರುವ ಎಪ್ರಿಲ್ 1 ರಿಂದ ಎಪ್ರಿಲ್ 15 ರವರೆಗೆ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಶ್ರೀ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ, ಹಿರಿಯ ಅರ್ಚಕರಾದ ವೆಂಕಟನರಸಿಂಹ ಉಪಾಧ್ಯಾಯ ಹಾಗೂ ರಾಘವೇಂದ್ರ ಉಪಾಧ್ಯಾಯರ ಉಪಸ್ಥಿತಿಯಲ್ಲಿ ಮತ್ತು ಯತಿವರೇಣ್ಯರ ಶುಭಾಶೀರ್ವಾದಗಳೊಂದಿಗೆ ವೈಭವೋಪೇತವಾಗಿ ನಡೆಸಲು ಸಂಕಲ್ಪಿಸಲಾಗಿದೆ, ಎಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿರುವ ನಾಡೋಜ ಡಾ| ಜಿ ಶಂಕರ್ ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳ ವಿವರಣೆ ನೀಡಿದರು.
ಪ್ರಮುಖ ಧಾರ್ಮೀಕ ಕಾರ್ಯಕ್ರಮಗಳು:
ಹೊರೆಕಾಣಿಕೆ: ರಾಜ್ಯ ಹಾಗೂ ಹೊರರಾಜ್ಯಗಳಿಂದ 2 ರಿಂದ 3 ಲಕ್ಷದಷ್ಟು ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದ್ದು ಆಗಮಿಸುವ ಎಲ್ಲಾ ಭಕ್ತಾಧಿಗಳಿಗೂ ದಿನಂಪ್ರತಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಪ್ರಯುಕ್ತ ಮಾರ್ಚ್ 27 ಕ್ಕೆ ಅವಿಭಜಿತ ದ. ಕ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಿಂದ ಪ್ರಸಾದದ ರೂಪದಲ್ಲಿ ಹೊರೆಕಾಣಿಕೆಯು ಕ್ಷೇತ್ರವನ್ನು ತಲುಪಲಿದೆ. ಈಗಾಗಲೇ ಹೈದ್ರಾಬಾದ್ ಕರ್ನಾಟಕ ಸೇರಿದಂತೆ ರಾಜ್ಯದ ಇತರ ಭಾಗಗಳಿಂದ ಹೊರೆಕಾಣಿಕೆಗಳು ದೇವಸ್ಥಾನಕ್ಕೆ ತಲುಪಿದೆ. ಕರಾವಳಿ ಭಾಗದ ಭಕ್ತಾಧಿಗಳ ಹೊರಕಾಣಿಕೆಯು 2000ಕ್ಕೂ ಮಿಕ್ಕಿದ ವಾಹನಗಳ ಮೂಲಕ ದೇವಸ್ಥಾನದ ಉತ್ತರ ಭಾಗದ ಮೆರವಣಿಗೆಯು ಮೂಳೂರಿನಿಂದ ಹಾಗೂ ದಕ್ಷಿಣ ಭಾಗದ ಮೆರವಣಿಗೆಯು ತೆಂಕ ಎರ್ಮಾಳ್ನಿಂದ ಹೊರಟು ವಿವಿಧ ರೀತಿಯ ಟ್ಯಾಬ್ಲೋ, ಚೆಂಡೆ, ಭಜನಾಕುಣಿತ ಮುಂತಾದ ಬಿರುದಾವಳಿಗಳೊಂದಿಗೆ ದೇವಸ್ಥಾನ ತಲುಪಲಿದೆ.
ಅನ್ನ ಛತ್ರ ಹಾಗೂ ಪಾರ್ಕಿಂಗ್: ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ನೂಕು ನುಗ್ಗಲಾಗದಂತೆ ಸುಮಾರು 1ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಅನ್ನಛತ್ರದ ಚಪ್ಪರ ನಿರ್ಮಿಸಿ ಎಲೆ ಊಟ ಮತ್ತು ಬಫೆ ಊಟಕ್ಕೆ ಅನುಕೂಲವಾಗುವಂತೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಹಾಗೂ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳ ವಾಹನ ನಿಲುಗಡೆಗೆ ಬೇಕಾಗುವಷ್ಟು ಪಾರ್ಕಿಂಗ್ ಜಾಗದ ಸಿದ್ದತೆ ಮಾಡಿಕೊಳ್ಳಲಾಗಿದೆ.
ಎಪ್ರಿಲ್ 1ರಂದು ರಾಜಗೋಪುರ ಹಾಗೂ ಲಕ್ಷ್ಮಿ ತೀರ್ಥ ಕೆರೆ ಉದ್ಘಾಟನೆ : ನೂತನವಾಗಿ ನಿರ್ಮಾಣಗೊಂಡ ಭವ್ಯ ರಾಜಗೋಪುರ ಹಾಗೂ ಸರಕಾರದ ಅನುಧಾನದೊಂದಿಗೆ ನಿರ್ಮಾಣಗೊಂಡ ಲಕ್ಷ್ಮಿ ತೀರ್ಥ ಕೆರೆಯು ಎಪ್ರಿಲ್ 1ರ ಸಂಜೆ 5 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ದಿನಂಪ್ರತಿ ಕುಂಕುಮಾರ್ಚನೆಯೊಂದಿಗೆ ಮಹಾಮಂಗಳಾರತಿ : ಎಪ್ರಿಲ್ 2ರಿಂದ ಎಪ್ರಿಲ್ 15ರತನಕ ಪ್ರತೀದಿನ ಸಂಜೆ ಗಂಟೆ 4 ರಿಂದ 5ರವರೆಗೆ ಸಾವಿರ ಸುಮಂಗಲೆಯರಿಂದ ಕುಂಕುಮಾರ್ಚನೆಯೊಂದಿಗೆ ಮಹಾಮಂಗಳಾರತಿ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಮಹಾಲಕ್ಷ್ಮಿ ದೇವಿಯ ಬಿಂಬ ಪ್ರತಿಷ್ಠೆ , ಸ್ವರ್ಣಕಲಶ ಪ್ರತಿಷ್ಠೆ ಹಾಗೂ ಮಹಾಅನ್ನಸಂತರ್ಪಣೆ ಎಪ್ರಿಲ್ 6 ರಂದು ನಡೆಯಲಿದೆ.
ವಾರ್ಷಿಕ ರಥೋತ್ಸವ :ವರ್ಷಂಪ್ರತಿ ನಡೆಯುವ ಶ್ರೀ ಮಹಾ ಲಕ್ಷ್ಮಿ ರಥೋತ್ಸವ ಹಾಗೂ ಮಹಾಅನ್ನಸಂತರ್ಪಣೆಯು ಎಪ್ರಿಲ್ 13ರಂದು ನಡೆಯಲಿದೆ.
ಚತುಃಪವಿತ್ರ ನಾಗಮಂಡಲ ಸೇವೆ : ಎಪ್ರಿಲ್ 15ರ ರಾತ್ರಿ ಗಂಟೆ 8ಕ್ಕೆ ಹಾಲಿಟ್ಟು ಸೇವೆ ರಾತ್ರಿ 9ರಿಂದ ಚತುಃಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಎಪ್ರಿಲ್ 16ರ ಬೆಳಗ್ಗೆ ಸಂಪೋಕ್ಷಣೆ, ಮಂತ್ರಾಕ್ಷತೆಯೊಂದಿಗೆ ಪುನಃ ಪ್ರತಿಷ್ಠೆ ಧಾರ್ಮಿಕ ವಿಧಿವಿಧಾನಗಳು ಶುಭಾಂತ್ಯವಾಗಲಿದೆ.
ನಿರಂತರ 15 ದಿನಗಳ ಪರ್ಯಂತ ಧಾರ್ಮಿಕ ಸಭಾಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಸಿದ್ಧರಾಮಯ್ಯ, ಹೆ ಚ್ ಡಿ ಕುಮಾರಸ್ವಾಮಿ, ಸಂಸದ ನಳಿನ್ ಕುಮಾರ್ ಕಟೀಲ್ , ಶೋಭಾಕರಂದ್ಲಾಜೆ , ರಾಜ್ಯದ ಹಾಲಿ ಹಾಗೂ ಮಾಜಿ ಸಚಿವರು, ಹಾಲಿ ಹಾಗೂ ಮಾಜಿ ಶಾಸಕರು, ರಾಜಕೀಯ ಮುಖಂಡರುಗಳು ಭಾಗವಹಿಸಲಿದ್ದಾರೆ. ವಿವಿಧ ಮಠಾಧೀಶರುಗಳು ಮತ್ತು ಧಾರ್ಮಿಕ ಮುಖಂಡರುಗಳು ಆಶೀರ್ವಚನ ನೀಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಾರತ ಸರಕಾರ ಪ್ರಸ್ತುತ ಪಡಿಸುವ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಾಂಜವೂರು ಇವರು ಸಾದರ ಪಡಿಸುವ 20 ರಾಜ್ಯಗಳ ಕಲಾವಿದರುಗಳ ಸಾಂಸ್ಕೃತಿಕ ಉತ್ಸವ ಏರ್ಪಡಿಸಲಾಗಿದೆ. ರಾಜ್ಯದ ಹಾಗೂ ಸ್ಥಳೀಯ ಕಲಾವಿದರುಗಳಿಂದ ಪ್ರತೀ ದಿನ ಸಂಜೆ ನೃತ್ಯ ವೈವಿಧ್ಯ, ಯಕ್ಷಗಾನ , ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಮತ್ತು ಖ್ಯಾತ ಗಾಯಕರೂ , ಸಂಗೀತ ನಿರ್ದೇಶಕರೂ ಆದ ಗಾನಗಂಧರ್ವ ವಿಜಯ ಪ್ರಕಾಶರವರಿಂದ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತೀದಿನ ಪೂರ್ವಾಹ್ನ ಗಂಟೆ 11.30 ರಿಂದ ರಾಜ್ಯದ ಖ್ಯಾತ ಕಲಾವಿದರುಗಳಿಂದ ಭಕ್ತಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.