ಮಂಗಳೂರು, ಅ 20: ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ವಿರುದ್ದ ಮತ್ತೊಂದು ದೂರು ದಾಖಲಾಗಿದೆ. ಬಿಜೆಪಿ ವತಿಯಿಂದ ಮರಳು ಸಮಸ್ಯೆ ವಿರುದ್ಧ ನಡೆದ ಉಪವಾಸ ಸತ್ಯಗ್ರಹದ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಅವರನ್ನು ಅವಹೇಳನಕಾರಿ ನಿಂದಿಸಿದ್ದಾರೆ ಎಂದು ಆರೋಪಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್, ಹಾಗೂ ಮುಡಿಪು ಬ್ಲಾಕ್ ಕಾಂಗ್ರೆಸ್ ಬೇರೆ ಬೇರೆಯಾಗಿ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುಡಿಪು ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರಾದ ಪ್ರಶಾಂತ್ ಕಾಜವ ಅವರು, ರಮಾನಾಥ ರೈ ಅವರು ಕಳೆದ ನಾಲ್ಕು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕಾರ್ಯೋನ್ಮುಖವಾಗಿರುವ ಹಿರಿಯ ಸಚಿವರಾಗಿದ್ದಾರೆ. ಇಂತಹ ಹಿರಿಯ ಸಚಿವರ ಬಗ್ಗೆ ಬಿಜೆಪಿಯ ಸಂಜೀವ ಮಠಂದೂರು ಅವರು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಮುಡಿಪು ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ರೈ ಅವರ ವಿರುದ್ದ ಅರೆಮರ್ಲೆರ್ ಎಂದು ಕರೆದಿರುವ ಮಠಂದೂರು ಅವರು ಯಾವ ಯೋಗ್ಯತೆಯುಳ್ಳವರು ಎಂದು ಅರಿವಾಗುತ್ತದೆ. ಇಂತಹ ನೀಚ ಹೇಳಿಕೆ ನೀಡಿ ರಾಜಕೀಯ ಮಾಡುತ್ತಿರುವ ಮಠಂದೂರು ವಿರುದ್ದ ಕೊಣಾಜೆ ಠಾಣೆಗೆ ದೂರು ನೀಡಿ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದೇವೆ. ಒಂದು ವೇಳೆ ಅವರು ಕ್ಷಮೆ ಯಾಚಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮಾಡಲು ನಿರ್ಧರಿಸಿದ್ದೇವೆ ಎಂದು ಎಚ್ಚರಿಸಿದರು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಉಪಾಧ್ಯಕ್ಷ ಮುಸ್ತಾಫ ಹರೇಕಳ ಮುಂತಾದವರು ಉಪಸ್ಥಿತರಿದ್ದರು.