ಮಂಗಳೂರು, ಮಾ 24(DaijiworldNews/MS): ದೇವಸ್ಥಾನದ ಜಾತ್ರೆ - ಉತ್ಸವಗಳ ಸಂದರ್ಭ ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅನುಮತಿ ಇಲ್ಲ ಎಂಬ ಬ್ಯಾನರ್ಗಳನ್ನು ಹಾಕಿರುವುದನ್ನು ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ತೀವ್ರವಾಗಿ ಖಂಡಿಸಿದ್ದು, ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಘೇರಾವ್ ಹಾಕುವುದಾಗಿ ಎಚ್ಚರಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಮೂಲ್ಕಿ ಬಪ್ಪನಾಡು ದೇವಸ್ಥಾನವು ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ವಾರ್ಷಿಕ ದೇವಾಲಯದ ಜಾತ್ರೆಯ ಸಮಯದಲ್ಲಿ, ಸುಮಾರು 1.5 ಲಕ್ಷ ಮಲ್ಲಿಗೆಯನ್ನು ದೇವಿಗೆ ಅರ್ಪಿಸಲಾಗುತ್ತದೆ. ಈ ಮಲ್ಲಿಗೆಯನ್ನು ಶಂಕರಪುರದ ಕ್ರಿಶ್ಚಿಯನ್ನರು ಬೆಳೆಸುತ್ತಾರೆ, ಮುಸ್ಲಿಮರು ಮಾರಾಟ ಮಾಡುತ್ತಾರೆ ಮತ್ತು ಹಿಂದೂಗಳು ದೇವಿಗೆ ಅರ್ಪಿಸುತ್ತಾರೆ.ಬಪ್ಪನಾಡು ರಥದ ಮೇಲಿರುವ ಮುಖ್ಯ ಛಾಯಾಚಿತ್ರ ಬಪ್ಪ ಬ್ಯಾರಿಯದ್ದು. ಈ ಪುಣ್ಯಕ್ಷೇತ್ರ ಇಡೀ ದೇಶಕ್ಕೆ ಮಾದರಿಯಾಗಿದೆ.
ಆದರೆ ವಿವಾದಾತ್ಮಕ ಬ್ಯಾನರ್ ಪ್ರದರ್ಶಿಸಿ ಅವ್ಯವಸ್ಥೆ ಸೃಷ್ಟಿಸಲಾಗಿದೆ. ಶ್ರೀ ಕ್ಷೇತ್ರದ ಆಡಳಿತ ಮಂಡಳಿ ತಮಗೂ ಬ್ಯಾನರ್ ಗೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರೂ ಜಿಲ್ಲಾಡಳಿತ ಬ್ಯಾನರ್ ತೆರವಿಗೆ ವಿಳಂಬ ಮಾಡುತ್ತಿರುವುದು ಅವ್ಯವಸ್ಥೆಯನ್ನು ಹೆಚ್ಚಿಸಿದೆ.ಜಿಲ್ಲಾಡಳಿತ ಇಂತಹ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಇಂತಹ ಸಮಾಜಘಾತುಕ ಕೃತ್ಯಗಳನ್ನು ಕ್ಷೇತ್ರದ ತಾಯಿ ಕೂಡಾ ಮೆಚ್ಚಲಾರರು ’ ಎಂದು ಮಿಥುನ್ ರೈ ಹೇಳಿದ್ದಾರೆ.
ಜಾತ್ರೆ, ಉತ್ಸವ ಬಂದು ವ್ಯಾಪಾರ ಮಾಡುವವರು ಬಡಪಾಯಿಗಳು, ಹೊಟ್ಟೆ ಪಾಡಿಗಾಗಿ ವ್ಯಾಪಾರ ಮಾಡುವವರು ಈ ರಾಜಕೀಯ ಬೇಕಿಲ್ಲ . ಹೀಗಾಗಿ ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಮಿಥುನ್ ರೈ ಎಚ್ಚರಿಸಿದ್ದಾರೆ.