ಮುಕ್ಕ, ಮಾ 24 (DaijiworldNews/DB): ಮುಕ್ಕದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾನಿಲಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಸ್ರಷ್ಠಿಕ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ವಿಶ್ವ ಜಲ ದಿನಾಚರಣೆ 2022 ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರಿನ ಅಗ್ರಿಮ ರೂಫ್ ಆಂಡ್ ಫೇಸೀಡ್ ಸಿಸ್ಟಮ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಬಿ. ಗೋವಿಂದ್ ರಮೇಶ್ ಮಾತನಾಡಿ, ನೀರು ಬಹಳ ಅಮೂಲ್ಯ. ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರಿನ ಮಹತ್ವವನ್ನು ಅರಿತುಕೊಂಡು ಸಮಾಜದ ಪ್ರತಿಯೋರ್ವ ನಾಗರಿಕರಿಗೆ ನೀರಿನ ಸದ್ಬಳಕೆ ಹಾಗೂ ನೀರಿನ ಮೂಲಗಳನ್ನು ಸಂರಕ್ಷಿಸುವಲ್ಲಿ ವಿಶೇಷ ಕಾಳಜಿಯನ್ನು ವಹಿಸಬೇಕು. ಸಿವಿಲ್ ಇಂಜಿನಿಯರಿಂಗ್ ಪದವೀಧರರಿಗೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸೇವೆ ಸಲ್ಲಿಸಲು ವಿಫುಲವಾದ ಅವಕಾಶವಿದೆ ಎಂದರು.
ರಾಷ್ಟ್ರ ನಿರ್ಮಾಣಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಸಿವಿಲ್ ಇಂಜಿನಿಯರಿಂಗ್ ಕೇವಲ ವೃತ್ತಿ ಅಲ್ಲ, ಸಿವಿಲ್ ಇಂಜಿನಿಯರಿಂಗ್ ನಾಗರೀಕತೆ ಹಾಗೂ ಸಮಾಜದ ಭದ್ರ ಬುನಾದಿಯ ತಳಹದಿಯಾಗಿದೆ. ಆದ್ದರಿಂದ ಈ ಕ್ಷೇತ್ರದ ವೃತ್ತಿಪರರು ಸದೃಢ ದೇಶ ಕಟ್ಟುವಲ್ಲಿ ಉತ್ತಮ ಕೊಡುಗೆ ನೀಡಬೇಕು ಹಾಗೂ ನೀರಿನ ಸಂರಕ್ಷಣೆಯಲ್ಲಿ ತೊಡಗಬೇಕು ಎಂದು ಹೇಳಿದರು.
ಶ್ರೀನಿವಾಸ್ ಯುನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥ ಡಾ. ಥಾಮಸ್ ಪಿಂಟೋ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿ ಕರ್ನಾಟಕ ಮತ್ತು ಮಲೆನಾಡಿನಲ್ಲಿ ನೀರು ಯಥೇಚ್ಛವಾಗಿ ಲಭ್ಯವಿದ್ದು, ನೀರಿನ ಸದ್ಭಳಕೆ ಆಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಳೆದ ಮೂವತ್ತು ವರ್ಷಗಳಿಂದ ವಿಶ್ವ ಸಂಸ್ಥೆಯು ಆಚರಿಸುತ್ತಿರುವ ವಿಶ್ವ ಜಲ ದಿನಾಚರಣೆಯನ್ನು ಸಮಾಜದ ಎಲ್ಲರೂ ಅತ್ಯಂತ ಕಾಳಜಿಯಿಂದ ಮತ್ತು ಆಸಕ್ತಿಯಿಂದ ನಡೆಸಬೇಕು. ನೀರು ಇದ್ದರೆ ಮಾತ್ರ ಈ ಭೂಮಿಯಲ್ಲಿ ಬದುಕಲು ಸಾಧ್ಯ. ನೀರು ಇಲ್ಲದಿದ್ದರೆ ಜೀವನವನ್ನು ಊಹಿಸಲು ಅಸಾಧ್ಯ. ಪ್ರಸ್ತುತ ವಿಶ್ವದಲ್ಲಿ, ಇಪ್ಪತ್ತೈದು ಪ್ರತಿಶತ ಜನರಿಗೆ ಶುದ್ಧವಾದ ಕುಡಿಯುವ ನೀರಿನ ಕೊರತೆಯಿದೆ. ಆದ್ದರಿಂದ, ನೀರನ್ನು ಸಮಯೋಚಿತವಾಗಿ ಬಳಸಿ, ನೀರಿನ ಮೂಲಗಳನ್ನು ಸಂರಕ್ಷಿಸಿ, ಮುಂದಿನ ಜನಾಂಗಕ್ಕೆ ನೀರಿನ ಸಮಸ್ಯೆ ಉಂಟಾಗದಂತೆ ನಾವೆಲ್ಲರೂ ಶ್ರಮ ವಹಿಸಬೇಕು ಎಂದು ಹೇಳಿದರು.
ಕಾಲೇಜಿನ ಉಪ ಪ್ರಾಂಶುಪಾಲ ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ರಾಮಕೃಷ್ಣ ಹೆಗಡೆ, ಸ್ರಷ್ಠಿಕ ಸಂಯೋಜಕ ಪ್ರೊ. ಕೆ. ಶ್ರೀನಾಥ್ ರಾವ್, ಸ್ರಷ್ಠಿಕ ಅಧ್ಯಕ್ಷ ಡೆಲ್ಸನ್ ಡಿಸೋಜಾ, ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಪ್ರವೀಣ್ ಬಿ.ಎಂ., ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಶ್ರೀಪ್ರಕಾಶ್ ಬಿ., ಕಾಲೇಜಿನ ತರಬೇತಿ ಮತ್ತು ನಿಯೋಜನೆ ವಿಭಾಗದ ಮುಖ್ಯಸ್ಥ ಪ್ರೊ. ಸಂಜಯ್ ಎಸ್., ಕಾಲೇಜಿನ ಕಚೇರಿ ವ್ಯವಸ್ಥಾಪಕ ಮಿಲನ್ ಕಾರಂತ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಪ್ರಸಾದ್ ದೇವಾಡಿಗ ಪ್ರಾರ್ಥಿಸಿದರು. ಪ್ರೊ. ಪ್ರಸನ್ನ ಪಿ. ರಾವ್ ವಂದಿಸಿದರು. ತಾನ್ಯಾ ಗಿರೀಶ್ ಮತ್ತು ನಿಧಿ ಕೇಣಿ ನಿರೂಪಿಸಿದರು.