Karavali
ಭಾರತದತ್ತ ತಿರುಗೀತೇ ಬದ್ಧ ವೈರಿ ಪಾಕ್ ಮಿಸೈಲ್ ?
- Thu, Mar 24 2022 02:07:27 PM
-
ಲೋಹಿತ್ ಕುಮಾರ್, ಕಲ್ಮಂಜ
ಮಂಗಳೂರು ಮಾ 24 (DaijiworldNews/SB): ಭಾರತ ಪಾಕಿಸ್ತಾನ ಅಂದಾಗ ನೆನಪಾಗುವುದು ವೈರತ್ವ..! ಇಡೀ ಜಗತ್ತೇ ಅರಿತಿರುವಂತೆ ನಮ್ಮ ರಾಜತಾಂತ್ರಿಕ ಬದ್ಧ ವೈರಿ ರಾಷ್ಟ್ರವಾಗಿರುವುದು ಪಾಕಿಸ್ತಾನ. 1947 ರ ಸ್ವಾತಂತ್ರ್ಯ ನಂತರ ಭಾರತ ಇಬ್ಭಾಗಗೊಂಡು ಪಾಕಿಸ್ತಾನ ರಾಷ್ಟ್ರವಾಯಿತು. ಅಂದಿನಿಂದ ಇಂದಿನವರೆಗೂ ಬದ್ಧ ವೈರಿಗಳಾಗಿಯೇ ಇದೆ ಪಾಕ್ ಮತ್ತು ಭಾರತ. ಅದಕ್ಕೆ ಮುಖ್ಯ ಕಾರಣ ಗಡಿ ವಿಚಾರ, ಕಾಶ್ಮೀರ ತಗಾದೆ ವಿಚಾರ ಹಾಗೂ ನಮ್ಮ ದೇಶದೊಳಗೆ ನುಸುಳುವ ಭಯೋತ್ಪಾದನೆಯ ವಿಚಾರ.. ಎಲ್ಲಾ ಕಾರಣಗಳಿಂದಾಗಿಯೇ ಭಾರತ ಮತ್ತು ಪಾಕಿಸ್ತಾನ ವೈರಿ ರಾಷ್ಟ್ರಗಳಾಗಿ ಮುಂದುವರಿದಿದೆ. ಇದೀಗ, ಪಾಕಿಸ್ತಾನದಲ್ಲಿ ರಾಜಕೀಯ ಕೆಸರೆರಚಾಟ ಮುಂದುವರಿದಿದ್ದು, ಈ ಮಧ್ಯೆ ಭಾರತಕ್ಕೆ ಪರಿಣಾಮ ಬೀಳುವ ಲೆಕ್ಕಚಾರಗಳು ಆರಂಭವಾಗಿದೆ....
2018ರಲ್ಲಿ ಪಾಕಿಸ್ತಾನದಲ್ಲಿ ಬಣ್ಣ-ಬಣ್ಣದ ಕನಸುಗಳನ್ನು ಜೋಡಿಸಿದ ಜೊತೆಯಲ್ಲಿ ಭಾರತ ವಿರೋಧಿ ಮಂತ್ರ ಪಠಿಸಿದ್ದ ಇಮ್ರಾನ್ ಖಾನ್ ಅಧಿಕಾರದ ಗದ್ದುಗೆಯೇರಿದರು. ಪಾಕಿಸ್ತಾನದಲ್ಲಿ ಭಾರತ ವಿರೋಧಿ ಮಂತ್ರ ಪಠಿಸಿದ್ದ ಇಮ್ರಾನ್ ಖಾನ್ ಒಂದೊಮ್ಮೆ ರಸ್ತೆ ಹೋರಾಟದ ಹಾದಿಯಿಂದಲೇ ಮುನ್ನಲೆಗೆ ಬಂದ ಹಿನ್ನಲೆ ಮತ್ತು ಪರದೆಯ ಮೇಲೆ ಬಣ್ಣದ ಲೋಕವನ್ನೇ ಸೃಷ್ಟಿಸಿದ ಹಿನ್ನಲೆಯಲ್ಲಿ ಪಾಕ್ ಮಾಧ್ಯಮಗಳು ಅವರನ್ನು "ಪಾಕಿಸ್ತಾನದ ಕೇಜ್ರಿವಾಲ್" ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಹೋಲಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಜೊತೆಯಲ್ಲಿ ಪಾಕ್ ಗದ್ದುಗೆಯೇರಿದ ಇಮ್ರಾನ್ ಖಾನ್ ಈಗ ಹೋರಾಟದ ಕಾರಣದಿಂದಾಗಿಯೇ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಇಮ್ರಾನ್ ಖಾನ್ ಗದ್ದುಗೆ ಅಲುಗಾಡುತ್ತಿರುವುದರಿಂದ ಪಾಕ್ ಆಡಳಿತ ಪಾಕಿಸ್ತಾನದ ಸೇನೆ ಸೇರುವ ಸಂಭವವೇ ಹೆಚ್ಚಾಗಿದೆ. ಆಡಳಿತ ಪಾಕ್ ಸೇನೆ ಪಾಲಾದರೆ ಆಗ ಸೇನೆಯ ನಿರ್ಣಯವೇ ಅಂತಿಮವಾಗುತ್ತದೆ. ಇದೇ ಕಾರಣದಿಂದಾಗಿ ಇದೀಗ ವಿಶ್ಲೇಷಕರು, ಪಾಕ್ ಆಡಳಿತ ಸೇನೆಯ ಪಾಲಾದರೆ ಭಾರತಕ್ಕೆ ಪರಿಣಾಮ ಎದುರಾಗಬಹುದು ಎಂದಿದ್ದಾರೆ....
ಭಾರತದ ವಿರುದ್ಧ ದುಸ್ಸಾಸಹಕ್ಕೆ ಸೇನೆ ಮುಂದಾಗಬಹುದು...!
ಪಾಕಿಸ್ತಾನದಲ್ಲಿ ಸ್ವಾತಂತ್ರ್ಯದ ಬಳಿಕ ಹಲವಾರು ಬಾರಿ ಆಡಳಿತದಲ್ಲಿ ಕ್ಷಿಪ್ರ ಕ್ರಾಂತಿಗಳಾಗಿವೆ. ಕ್ಷಿಪ್ರ ಕ್ರಾಂತಿಗಳಾದಗಲೆಲ್ಲಾ ಸೇನಾಡಳಿತಗಳು ದೇಶದ ಚುಕ್ಕಾಣಿಯನ್ನು ತಮ್ಮ ತೆಕ್ಕೆಗೆ ಪಡೆದುಕೊಂಡಿದೆ. ಪಾಕ್ ಸೇನೆ ಚುಕ್ಕಾಣಿ ಹಿಡಿದಾಗಲೆಲ್ಲಾ ಭಾರತದ ವಿರುದ್ಧ ಕಾಲುಕೆರೆದು ಜಗಳಕ್ಕೆ ಬಂದಿರುವುದನ್ನು ಇತಿಹಾಸಗಳು ಸಾರಿ ಹೇಳುತ್ತವೆ. ಇದೇ ಕಾರಣದಿಂದ ಪಾಕಿಸ್ತಾನದ ಬೆಳವಣಿಗೆಗಳ ಬಗ್ಗೆ ನಮಗೆ ಸಂಬಂಧವೇ ಇಲ್ಲ ಎಂದು ಕೂರುವಂತಿಲ್ಲ. ಬದಲಾಗಿ, ಪಾಕಿಸ್ತಾನದ ಪ್ರತೀ ನಡೆಯ ಬಗ್ಗೆ ಕಟ್ಟೆಚ್ಚರ ವಹಿಸಲೇ ಬೇಕಾಗುತ್ತದೆ. ಉರಿ ಸೇನಾ ನೆಲೆ ಮೇಲೆ ದಾಳಿ, ಪುಲ್ವಾಮಾ ಭಯೋತ್ಪಾದಕರ ಕೃತ್ಯಕ್ಕೆ ಉತ್ತರವೆಂಬಂತೆ ಭಾರತವು ನಡೆಸಿದ ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ಏರ್ ಸ್ಟ್ರೈಕ್ ಪಾಕಿಸ್ತಾನಕ್ಕೆ ಬಲವಾದ ಪೆಟ್ಟು ನೀಡಿತ್ತು. ಪಿಒಕೆಯಲ್ಲಿದ್ದ ಉಗ್ರರ ಅಡಗುತಾಣಗಳನ್ನು ಈ ದಾಳಿಯಲ್ಲಿ ನಾಶ ಮಾಡಿತ್ತು. ಇದೆಲ್ಲವು ಕೂಡಾ ಪಾಕಿಸ್ತಾನದ ಮಾನವನ್ನು ಭಾರತ ವಿಶ್ವದೆದುರು ಹರಾಜು ಮಾಡಿದಂತಾಗಿತ್ತು. ಭಾರತದ ದಿಟ್ಟ ಕ್ರಮದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಮುಜುಗರ ಅನುಭವಿಸಂತಾಗಿತ್ತು. ಇವ್ಯಾವುದನ್ನೂ ಕೂಡಾ ಪಾಕಿಸ್ತಾನ ಸೇನೆ ಇನ್ನೂ ಮರೆತಂತಿಲ್ಲ. ಇತ್ತೀಚೆಗಷ್ಟೆ ಭಾರತದ ಮಿಸೈಲ್ ಒಂದು ಅಚಾನಕ್ ಆಗಿ ಪಾಕಿಸ್ತಾನದಲ್ಲಿ ಬಿದ್ದಿದ್ದು ಆ ಬಳಿಕ ಪಾಕಿಸ್ತಾನದ ಸೇನಾ ಮುಖ್ಯಸ್ಥ ನಾವೂ ಪ್ರತಿದಾಳಿ ಮಾಡಬಹುದಿತ್ತು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದು ಪಾಕಿಸ್ತಾನದ ಮನಸ್ಥಿತಿಯನ್ನು ಸ್ಪಷ್ಟಪಡಿಸುತ್ತದೆ. ಇದೀಗ ಇಮ್ರಾನ್ ಖಾನ್ ಅಧಿಕಾರ ಕಳೆದುಕೊಂಡರೆ ಅಧಿಕಾರದ ಚುಕ್ಕಾಣಿ ಸೇನೆಯ ಪಾಲಾಗುತ್ತದೆ. ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ಮತ್ತೆ ಸೇನೆಯ ಪಾಲಾದರೆ ಅದು ಖಂಡಿತವಾಗಿಯೂ ಭಾರತದ ವಿರುದ್ಧ ದುಸ್ಸಾಹಸಕ್ಕೆ ಕೈ ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಅಭಿಪ್ರಾಯಗಳು ದಟ್ಟವಾಗಿದೆ. ರಷ್ಯಾ ಉಕ್ರೇನ್ ಯುದ್ಧವು ಜಾಗತಿಕ ವ್ಯವಸ್ಥೆಗೆ ಭಾರೀ ಹೊಡೆತ ನೀಡಿರುವ ಮಧ್ಯೆ ಇದೀಗ ಪಾಕಿಸ್ತಾನದ ಬೆಳವಣಿಗೆಯ ಬಗ್ಗೆ ಜಗತ್ತು ಕಣ್ಣಿಟ್ಟಿದೆ....
ಪಾಕ್ ಸೇನಾ ಮುಖ್ಯಸ್ಥರು ಬದಲಾಗುವರೋ ಅಥವಾ ಇಮ್ರಾನೋ ?
ಪಾಕಿಸ್ತಾನದಲ್ಲಿ ರಾಜಕೀಯ ಬಿರುಗಾಳಿ ಎದ್ದಿದ್ದು ಇಮ್ರಾನ್ ಖಾನ್ ಅವರ ಪದಚ್ಯುತಿಗೆ ಸೇನೆಯೂ ಕಸರತ್ತು ನಡೆಸುತ್ತಿದೆ ಎಂಬಂಶವು ಬಯಲಾಗಿದೆ. ಇಮ್ರಾನ್ ಖಾನ್ ಸರಕಾರಕ್ಕೆ ಇದೀಗ ಬೆಂಬಲದ ಕೊರತೆ ಎದುರಾಗಿದ್ದು, ಬಂಡೆದ್ದ ಅನೇಕ ಜನಪ್ರತಿನಿಧಿಗಳು ಪಕ್ಷಾಂತರ ಮಾಡಿದ್ದಾರೆ. ಇಮ್ರಾನ್ ಗೆ ಬಹುಮತ ಸಾಬೀತುಪಡಿಸಲು 172 ಸದಸ್ಯರ ಬೆಂಬಲ ಬೇಕು ಆದರೆ ಇದೀಗ ನೂರಕ್ಕೂ ಅಧಿಕ ಮಂದಿ ಪಕ್ಷ ಬದಲಿಸಿ, ಪ್ರತಿಪಕ್ಷಗಳ ಜೊತೆಯಲ್ಲಿ ಕೈ ಜೋಡಿಸಿಕೊಂಡಿದ್ದಾರೆ. ಜತೆಗೆ, ಮೈತ್ರಿ ಪಕ್ಷಗಳು ಕೂಡಾ ಇಮ್ರಾನ್ ಖಾನ್ ಗೆ ಕೈಗೆಟುಕದೇ ಇರುವ ಸಾಧನವಾಗಬಹುದು. ಇದರ ಅಂತಿಮ ನಿರ್ಣಯ ಮಾ. 25ರಂದು ಹೊರಬೀಳಬಹುದು.! ಈ ಮಧ್ಯೆ, ಪಾಕ್ ಸೇನೆ ಕೂಡಾ ಇಮ್ರಾನ್ ಖಾನ್ ಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದು ತೀವ್ರ ಕುತೂಹಲವನ್ನು ಕೆರಳಿಸಿದೆ. ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ, ಐಎಸ್ ಐ ಡಿಜಿ ಲೆಪ್ಟಿನೆಂಟ್ ಜನರಲ್ ನದೀಮ್ ಅಂಜುಮ್ ಅವರು ಇಮ್ರಾನ್ ಗೆ ಪದತ್ಯಾಗ ಮಾಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಇಮ್ರಾನ್ ಖಾನ್ ಅವರು ರಾಜೀನಾಮೆ ನೀಡಲೇಬೇಕೆಂದು ಸೇನೆಯೂ ಕೂಡಾ ಪಟ್ಟು ಹಿಡಿದಿದೆ ಎನ್ನಲಾಗಿದೆ. ಆದರೆ, ಈ ಮಧ್ಯೆ ಇಮ್ರಾನ್ ಹೊಸ ದಾಳವನ್ನು ಪ್ರಯೋಗಿಸಲು ಮುಂದಾಗಿದ್ದಾರೆ....
ರಾಜೀನಾಮೆಗೆ ಸೇನೆ ಒತ್ತಡ ಹಾಕುತ್ತಿರುವ ಹಿನ್ನಲೆಯಲ್ಲಿ ಇಮ್ರಾನ್ ಖಾನ್ ಇದೀಗ ಸೇನಾ ಮುಖ್ಯಸ್ಥರನ್ನೇ ಬದಲಾಯಿಸಲು ಹೊಸ ದಾಳ ಪ್ರಯೋಗಿಸಲು ಮುಂದಾಗಿದ್ದಾರೆ. ಈ ಹಿಂದೆ ಪಾಕ್ ಅಧ್ಯಕ್ಷ ಝುಲ್ಫಿಕರ್ ಅಲಿ ಭುಟ್ಟೋ ಅವರು 1972ರಲ್ಲಿ ಹಂಗಾಮಿ ಸೇನಾ ಮುಖ್ಯಸ್ಥ ಜನರಲ್ ಗುಲ್ ಹಸನ್ ಮತ್ತು ವಾಯುಸೇನಾ ಮುಖ್ಯಸ್ಥ ಏರ್ ಮಾರ್ಷಲ್ ಅಬ್ದುಲ್ ರಹೀಮ್ ಖಾನ್ ಅವರನ್ನು ಪದಚ್ಯುತಗೊಳಿಸಿ, ತಮ್ಮ ಅಧಿಕಾರವನ್ನು ಉಳಿಸಿಕೊಂಡಿದ್ದರು. ಅದೇ ದಾಳವನ್ನು ಇದೀಗ ಇಮ್ರಾನ್ ಖಾನ್ ಬಳಸಲು ಮುಂದಾದರೂ ಸಹ ಈಗ ಪರಿಸ್ಥಿತಿ ಈ ಹಿಂದಿನಂತಿಲ್ಲ...! ಹಾಲಿ ಸೇನಾ ಮುಖ್ಯಸ್ಥರಿಗೆ ಸೇನೆಯ ಎಲ್ಲಾ ಜನರಲ್ ಗಳು ಬೆಂಬಲವಿರುವುದು ಇಮ್ರಾನ್ ಖಾನ್ ಗೆ ಹಿನ್ನಡೆಯಾಗಿದೆ. ಹೀಗಾಗಿ ಇಮ್ರಾನ್ ಖಾನ್ ಅವರೇ ಕ್ಲೀನ್ ಬೌಲ್ಡ್ ಆಗುವ ಸಾಧ್ಯತೆಗಳು ದಟ್ಟವಾಗಿದೆ...
ಸದಾ ಭಾರತದ ವಿರುದ್ಧ ಕಿಡಿಕಾರುತ್ತಲೇ ಇರುವ ಪಾಕಿಸ್ತಾನ ಕಾಲುಕೆರೆದು ದುಸ್ಸಾಹಸಕ್ಕೆ ಕೈ ಹಾಕಿರುವ ಘಟನೆಗಳನ್ನು ಮೆಲುಕು ಹಾಕಿದಾಗ ಮತ್ತೆ ಭಾರತದ ವಿರುದ್ಧ ಪಾಕ್ ಕಾಲುಕೆರೆದು ಜಗಳಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಭಾರತದ ಸೇನೆಯು ಪಾಕಿಸ್ತಾನಕ್ಕಿಂತ ಬಲಿಷ್ಠವಾಗಿರುವುದರಿಂದ ಯಾವುದೇ ಚಿಂತೆಯಿಲ್ಲವಾದರೂ ಕೂಡಾ ಪಾಕಿಸ್ತಾನದ ಕುತಂತ್ರ ಮತ್ತು ದುಸ್ಸಾಹಸ ಯುದ್ಧದ ಚಿತ್ರಣಕ್ಕೆ ಬದಲಾದರೆ ಪರಿಣಾಮ ಕೆಟ್ಟದ್ದಾಗಲೂಬಹುದು..! ಏನೇ ಆಗಲಿ, ಪಾಕಿಸ್ತಾನಕ್ಕೆ ನಿಖರ ಉತ್ತರ ಕೊಡಬಲ್ಲ ಭಾರತ ಪಾಕಿಸ್ತಾನದ ನಿರ್ಣಯದ ಮೇಲೆ ನಿಂತಿದೆ.... ನಾಳೆ ಪಾಕಿಸ್ತಾನದ ರಾಜಕೀಯ ಚಿತ್ರಣದ ಮೇಲೆ ಜಗತ್ತು ಈಗ ಕಣ್ಣಿಟ್ಟಿದೆ...! ಒಂದು ವೇಳೆ ಭಾರತದೆಡೆಗೆ ಪಾಕ್ ಮಿಸೈಲ್ ಗಳು ತಿರುಗಿ ನಿಂತರೆ ಅದಕ್ಕೆ ಖಂಡಿತವಾಗಿಯೂ ಪಾಕಿಸ್ತಾನ ಸೂಕ್ತ ಬೆಲೆ ತೆರಬೇಕಾಗುತ್ತದೆ.