ಮಂಗಳೂರು, ಮಾ 24(DaijiworldNews/MS): ಪಾಕಿಸ್ತಾನ, ಚೀನಾ ಮತ್ತು ಇತರ ಕೆಲವು ದೇಶಗಳು ಭಾರತೀಯ ಭೂಪಟದಲ್ಲಿ ಉದ್ದೇಶಪೂರ್ವಕವಾಗಿ ಕಾಶ್ಮೀರವನ್ನು ಅಳಿಸಿಹಾಕುವುದನ್ನು ಆಗಾಗ್ಗೆ ಗಮನಿಸಿರಬಹುದು. ಆದರೆ ವಿಚಿತ್ರ ಸಂಗತಿ ಎಂದರೆ, ಕರ್ನಾಟಕ ಪಿಯು ಶಿಕ್ಷಣ ಮಂಡಳಿಯು ಮಕ್ಕಳಿಗೆ ಭಾರತದ ಭೂಪಟದಲ್ಲಿ ಕಾಶ್ಮೀರದ ಒಂದು ಭಾಗವನ್ನೇ ಇಲ್ಲದಂತೆ ತೋರಿಸುವ ನಕ್ಷೆಯನ್ನು ಒದಗಿಸಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾರ್ಚ್ 19 ರಂದು ಶನಿವಾರ ನಡೆದ ನಡೆದ ಇತಿಹಾಸ ವಿಷಯದ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ, ಇಲಾಖೆಯು ನೀಡಿದ ಭಾರತದ ಭೂಪಟದಲ್ಲಿ ಅರ್ಧ ಕಾಶ್ಮೀರವೇ ಮಾಯವಾಗಿದೆ.
ಸದರಿ ಪ್ರಶ್ನೆ ಪತ್ರಿಕೆಯಲ್ಲಿ, ಪಟ್ಟಿ ಮಾಡಲಾದ ಯಾವುದೇ ಐದು ಐತಿಹಾಸಿಕ ಸ್ಥಳಗಳನ್ನು ಗುರುತಿಸಲು ಮತ್ತು ಈ ಪ್ರತಿಯೊಂದು ಸ್ಥಳಗಳ ಬಗ್ಗೆ ಎರಡು ವಾಕ್ಯಗಳಲ್ಲಿ ವಿವರಣೆಯನ್ನು ಬರೆಯಲು ವಿದ್ಯಾರ್ಥಿಗಳಿಗೆ ಹೇಳಲಾಗಿತ್ತಿ. ಆದರೆ ಭಾರತದ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಬಿಟ್ಟು ಹೋಗಿರುವುದು ಕಂಡುಬಂದಿದೆ.
ಪೂರ್ವಸಿದ್ಧತಾ ಪ್ರಶ್ನೆ ಪತ್ರಿಕೆಗಳನ್ನು ಪಿಯು ಇತಿಹಾಸ ಉಪನ್ಯಾಸಕರ ಸಂಘದ ಮೇಲ್ವಿಚಾರಣೆಯಲ್ಲಿ ತಯಾರಿಸಲಾಗುತ್ತದೆ. ಈ ವರ್ಷವೂ ಪಿಯು ಮಂಡಳಿ ನಿರ್ದೇಶನದಂತೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಸಂಘಕ್ಕೆ ಪತ್ರಿಕೆ ತಯಾರಿಯ ಕೆಲಸ ನೀಡಲಾಗಿದೆ. ದಕ್ಷಿಣ ಕನ್ನಡದಲ್ಲಿ ಮಾತ್ರ ಈ ಪ್ರಮಾದ ಎಸಗಲಾಗಿದ್ದು, ಇತರೆ ಜಿಲ್ಲೆಗಳಲ್ಲಿ ನೀಡಲಾದ ಪ್ರಶ್ನೆ ಪತ್ರಿಕೆಗಳಲ್ಲಿ ಕಾಶ್ಮೀರದ ಸಂಪೂರ್ಣ ನಕ್ಷೆ ಇದೆ ಎಂದು ತಿಳಿದುಬಂದಿದೆ.
ಆಗಿರುವ ಪ್ರಮಾದದ ಬಗ್ಗೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಹಂತದಲ್ಲಿ ಚರ್ಚೆ ಶುರುವಾಗಿದೆ. ಪ್ರತಿಭಟನೆ ಸಿದ್ಧತೆ ನಡೆಯುತ್ತಿದೆ. ಆದರೆ ಅಧಿಕಾರಿ ವರ್ಗ ಈ ಬಗ್ಗೆ ಆಕ್ಷೇಪ ಅಥವಾ ದೂರು ಬಂದಿಲ್ಲ ಎಂದು ಪ್ರತಿಕ್ರಿಯಿಸಿದೆ.