ಮಂಗಳೂರು, ಮಾ 23 (DaijiworldNews/DB): ದೇವಸ್ಥಾನಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳಲ್ಲಿ ವ್ಯಾಪಾರ ನಡೆಸಲು ಹಿಂದೂಯೇತರರಿಗೆ ಸರ್ಕಾರ ಅವಕಾಶ ಕಲ್ಪಿಸಬಾರದು ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಆಗ್ರಹಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ನಿಯಮ 2002, 31(12)ರ ಪ್ರಕಾರ ಆದೇಶ ಹೊರಡಿಸಬೇಕು. ಈ ನಿಯಮದ ಪ್ರಕಾರ ಹಿಂದೂಯೇತರರು ಹಿಂದೂ ಧಾರ್ಮಿಕ ಕೇಂದ್ರಗಳ ಬಳಿ ಆಸ್ತಿ ಹೊಂದುವಂತಿಲ್ಲ ಎಂದಿದೆ. ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಲಾಗಿದ್ದು, ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಟೆಂಡರ್ ನೀಡಬಾರದು ಎಂದು ತಿಳಿಸಲಾಗಿದೆ ಎಂದರು.
ಕೆಲವು ದೇವಸ್ಥಾನಗಳಲ್ಲಿ ಜಾತ್ರಾ ಮಹೋತ್ಸವ ವೇಳೆ ಹಿಂದೂಯೇತರರಿಗೆ ಅವಕಾಶ ನಿರಾಕರಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಮುಂದೆ ಎಲ್ಲಾದರೂ ವ್ಯಾಪಾರ ನಡೆಸುವುದು ಕಂಡು ಬಂದರೆ ನಾವು ಅವಕಾಶ ಹಿಂಪಡೆಯಲು ಹೋರಾಟ ಮಾಡುತ್ತೇವೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಮೇಲೆ ದಾಳಿ ಮಾಡುವುದು, ಗೋವುಗಳನ್ನು ಕದಿಯುವುದು, ಮತಾಂತರ, ಲವ್ ಜಿಹಾದ್ ನಂತಹ ಪ್ರಕರಣಗಳು ಹೆಚ್ಚುತ್ತಿವೆ. ಹಿಜಾಬ್ ತೀರ್ಪು ವಿರೋಧಿಸಿ ಬಂದ್ ಗೆ ಕರೆ ನೀಡಿ ಮೆಡಿಕಲ್ ಶಾಪ್, ಹಾಲಿನ ಅಂಗಡಿಗಳನ್ನೂ ಮುಚ್ಚಿದ್ದರು. ಇದು ಇಲ್ಲಿವರೆಗೆ ನಡೆದ ಇತಿಹಾಸವೇ ಇಲ್ಲ ಎಂದು ಶರಣ್ ಪಂಪ್ ವೆಲ್ ತಿಳಿಸಿದರು.
ಕದ್ರಿ ದೇವಳದಲ್ಲಿ ಹುಂಡಿ ಹಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇವಸ್ಥಾನದ ಟ್ರಸ್ಟಿ ಹಣ ಕಳವು ಮಾಡಿದ್ದಲ್ಲಿ ಅವರ ವಿರುದ್ಧ ದೇವಳದ ಆಡಳಿತ ಮಂಡಳಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಸಂಯೋಜಕ ಭುಜಂಗ ಕುಲಾಲ್, ಜಿಲ್ಲಾ ಸಂಯೋಜಕ ಪುನೀತ್ ಅತ್ತಾವರ ಉಪಸ್ಥಿತರಿದ್ದರು.