ಮಂಗಳೂರು, ಮಾ 23 (DaijiworldNews/DB): ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು, ಭಾರತೀಯ ಹವಾಮಾನ ಇಲಾಖೆ ’ಯಲ್ಲೋ ಅಲರ್ಟ್’ ಘೋಷಣೆ ಮಾಡಿದೆ.
ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸೆಕೆ ಹೆಚ್ಚಿದ್ದು, ಸೋಮವಾರ ಮಧ್ಯಾಹ್ನದ ವೇಳೆಗೆ ಮಳೆ ಸುರಿದು ಇಳೆ ತಂಪಾಗಿತ್ತು. ಸೋಮವಾರ ರಾತ್ರಿ, ಮಂಗಳವಾರ ರಾತ್ರಿಯೂ ಜಿಲ್ಲೆಯ ಕೆಲವೆಡೆ ಮಳೆ ಬಂದಿದೆ. ಅಳದಂಗಡಿ, ನಾರಾವಿ ಸುತ್ತಮುತ್ತ ಮಂಗಳವಾರ ಮಳೆಯಾಗಿದೆ. ಬಂಟ್ವಾಳದ ಹಲವೆಡೆ ಸಾಧಾರಣ ಮಳೆ ಸುರಿದಿದೆ. ತಡರಾತ್ರಿಯೂ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ.
ದ.ಕ. ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಬುಧವಾರ ಮತ್ತು ಗುರುವಾರವೂ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಯಲ್ಲೋ ಎಲರ್ಟ್ ಘೋಷಿಸಿದೆ. ಮಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಬಿಸಿಲಿದ್ದರೆ, ಬಳಿಕ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು.