ಮಂಗಳೂರು, ಮಾ 23 (DaijiworldNews/HR): ಕದ್ರಿ ಮಂಜುನಾಥ ಕ್ಷೇತ್ರದ ಕಾಣಿಕೆ ಹುಂಡಿಗೆ ಟ್ರಸ್ಟಿ ಕನ್ನ ಹಾಕಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ನಿವೇದಿತಾ ಎನ್ ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ.
ಆರೋಪ ಪ್ರಕರಣಕ್ಕೆ ಸಂಬಂಧಿಸಿ ಮಹಿಳಾ ಟ್ರಸ್ಟಿ ನಿವೇದಿತಾ ಸ್ಪಷ್ಟನೆ ನೀಡಿದ್ದು, ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಹುಂಡಿ ಹಣದ ಬಗ್ಗೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಆಗುತ್ತಿರುವ ಮಾನಹಾನಿಯನ್ನು ಪ್ರಕಟಿಸುತ್ತಿದ್ದು, ಇದು ಸಂಪೂರ್ಣ ಸುಳ್ಳು ಮತ್ತು ಸತ್ಯಕ್ಕೆ ದೂರವಾಗಿದೆ. ಈ ಬಗ್ಗೆ ನಗರ ಪೊಲೀಸ್ ಕಮೀಷನರ್ ಅವರಿಗೆ ಲಿಖಿತ ದೂರು ನೀಡಿ ಇಂತಹ ಸುಳ್ಳು ಸುದ್ದಿ ಹರಡುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇನೆ ಎಂದರು.
ಇನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಪುರುಷೋತ್ತಮ ಎಚ್. ಕೆ ಅವರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಅವರಿಗೆ ಅಧ್ಯಕ್ಷರಾಗಲು ಬೆಂಬಲ ನೀಡದೆ, ಎ.ಜೆ ಶೆಟ್ಟಿ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಅನುಮೋದನೆ ಮಾಡಿರುವುದಕ್ಕಾಗಿ ದ್ವೇಷ ಕಟ್ಟಿಕೊಂಡು ನನ್ನನ್ನು ಸಮಿತಿ ಸದಸ್ಯ ಸ್ಥಾನದಿಂದ ರಾಜೀನಾಮೆ ನೀಡಬೇಕೆಂದು ನಿರಂತರ ಒತ್ತಡ ಹಾಕಿ ನೀವು ರಾಜೀನಾಮೆ ನೀಡದಿದ್ದರೆ ಇದರ ಪರಿಣಾಮ ಎದುರಿಸುತ್ತೀರಿ ಎಂದು ಹೇಳುತ್ತಿದ್ದರು.
ಆದರೆ ಇದನ್ನು ನಾನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದೀಗ ದೇವಸ್ಥಾನದ ಹುಂಡಿ ಹಣದ ಬಗ್ಗೆ ನನ್ನ ಹೆಸರು ಸೇರಿಸಿಕೊಂಡು ಸುಳ್ಳು ಸುದ್ದಿಗಳನ್ನು ಹಾಗೂ ದೃಶ್ಯವನ್ನು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಪುರುಷೋತ್ತಮ್ ಎಚ್ ಕೆ ಅವರು ತೇಜ್ಪಾಲ್ ಸುವರ್ಣ ಎಂಬವರ ಮೂಲಕ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ ಈ ಬಗ್ಗೆ ಪುರುಷೋತ್ತಮ್ ಎಚ್ ಕೆ ಅವರು ತೇಜ್ಪಾಲ್ ಸುವರ್ಣ ವಿರುದ್ದ ಪೊಲೀಸ್ ಕಮೀಷನರ್ ಅವರಿಗೆ ದೂರು ಹಾಗೂ ಮಾನಹಾನಿ ಪ್ರಕರಣ ದಾಖಲಿಸುತ್ತಿದ್ದೇನೆ. ಹಾಗೆಯೇ ಈ ಬಗ್ಗೆ ಕ್ಷೇತ್ರ ಕದ್ರಿಗೆ ಪುರುಷೋತ್ತಮ ಮತ್ತು ತೇಜ್ಪಾಲ್ ಸುವರ್ಣ ಪ್ರಮಾಣ ಮಾಡಲು ನಾನು ಅವರನ್ನು ಆಹ್ವಾನಿಸುತ್ತಿದ್ದೇನೆ ಎಂದು ಮಾಧ್ಯಮ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಹಿಂದಿನ ವರದಿ:
ಮಂಗಳೂರು: ಕದ್ರಿ ದೇವಳದ ಹುಂಡಿ ಹಣಕ್ಕೆ ಕನ್ನ - ಮಹಿಳಾ ಟ್ರಸ್ಟಿಯ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಮಂಗಳೂರು, ಮಾ 23 (DaijiworldNews/HR): ಕದ್ರಿ ಮಂಜುನಾಥ ಕ್ಷೇತ್ರದ ಕಾಣಿಗೆ ಹುಂಡಿಗೆ ಸರಕಾರದಿಂದ ನೇಮಕವಾದ ಟ್ರಸ್ಟಿಯೇ ಕನ್ನ ಹಾಕಿರುವ ಘಟನೆ ನಡೆದಿದ್ದು, ಈ ಕೃತ್ಯದ ವಿಡಿಯೋ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.
ಫೆ 24ರಂದು ದೇವಾಸ್ಥಾನದ ಕಾಣಿಕೆ ಡಬ್ಬಿ ಹಣದ ಲೆಕ್ಕಚಾರ ನಡೆಸಿದ್ದು, ಇದಾಗಿ ಎರಡು ದಿನಗಳ ಬಳಿಕ ಟ್ರಸ್ಟಿಯೊಬ್ಬರಿಗೆ ಅಪರಿಚಿತ ಮಹಿಳೆ ಕರೆ ಮಾಡಿ, 500 ರೂ. ನೋಟುಗಳನ್ನು ಮಹಿಳಾ ಟ್ರಸ್ಟಿ ತನ್ನ ಬ್ಲೌಸ್ ಒಳಗೆ ತುರುಕಿಸುತ್ತಿರುವುದನ್ನು ನಾನು ನೋಡಿದ್ದೇನೆ. ಬೇಕಾದರೆ ಸಿಸಿ ಕ್ಯಾಮಾರ ಪರಿಶೀಲಿಸಿ ಎಂದು ಹೇಳಿದ್ದರು.
ಇದಾದ ಬಳಿಕ ಟ್ರಸ್ಟಿಗಳು ಸೇರಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಮಹಿಳಾ ಟ್ರಸ್ಟಿಯೊಬ್ಬರು ನೋಟಿನ ಬಂಡಲ್ ಒಂದನ್ನು ಬ್ಯಾಗ್ ಗೆ ಹಾಕುತ್ತಿರುವುದು ಕಂಡು ಬಂದಿದೆ. ಇನ್ನು ಈ ಕುರಿತು ವ್ಯವಸ್ಥಾಪನ ಆಡಳಿತ ಸಮಿತಿ ತುರ್ತು ಸಭೆ ಕರೆದು ವಾದ ವಿವಾದ ನಡೆದ ಬಳಿಕ ಮಹಿಳಾ ಟ್ರಸ್ಟಿ ರಾಜೀನಾಮೆ ನೀಡುವುದಾಗಿ ಒಪ್ಪಿದ್ದರು. ಆದರೆ ವಾರ ಕಳೆದರೂ ರಾಜೀನಾಮೆ ನೀಡದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಸ್ಥಳೀಯರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು.
ಈ ಬಗ್ಗೆ ಸಚಿವ ವಿ. ಸುನೀಲ್ ಕುಮಾರ್ ಪ್ರತಿಕ್ರಿಯಿಸಿ, ಈ ಕುರಿತು ಮಾಹಿತಿ ಬಂದಿಲ್ಲ. ಟ್ರಸ್ಟಿಗಳು ತಪ್ಪು ಮಾಡಿದ್ದು ನಿಜವಾದರೆ ರಕ್ಷಿಸುವ ಪ್ರಮೇಯವೇ ಇಲ್ಲ. ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.