ಮಂಗಳೂರು, ಮಾ 23 (DaijiworldNews/MS):ಇಲಾಖೆಯ ಪೂರ್ವಾನುಮತಿ ಇಲ್ಲದೆ ಹಾಗೂ ಹಿರಿಯ ಪೊಲೀಸ್ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಅನುಮತಿ ಪಡೆಯದೆ ವಿದೇಶ ಪ್ರಯಾಣ ಮಾಡಿದ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿರುವ ಮಹಮ್ಮದ್ ಶರೀಫ್ ಅವರನ್ನು ಮಂಗಳವಾರ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.
ಮಹಮ್ಮದ್ ಶರೀಫ್ ತನ್ನ ಊರಿನ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಇರುವುದರಿಂದ ಮಾ.16ರಿಂದ 19 ರ ವರೆಗೆ ರಜೆ ಪಡೆದಿದ್ದರು. ಅಲ್ಲದೆ, ಮಾ.20 ರಂದು ಹೆಚ್ಚುವರಿ ರಜೆಯನ್ನು ಪಡೆದುಕೊಂಡಿದ್ದರು. ಆದರೆ ಈ ಅವಧಿಯಲ್ಲಿ ಶರೀಫ್ ಇಲಾಖೆಗೆ ಮಾಹಿತಿ ನೀಡದೆ ದುಬೈಗೆ ತೆರಳಿರುವುದು ದೃಢಪಟ್ಟಿದೆ.
ಪೊಲೀಸ್ ಸೇವೆಯಲ್ಲಿದ್ದವರು ಇಲಾಖೆಯ ಪೂರ್ವಾನುಮತಿ ಪಡೆಯದೆ ವಿದೇಶ ಪ್ರಯಾಣ ಕೈಗೊಳ್ಳುವಂತಿಲ್ಲ. ಹೀಗಾಗಿ ಪೊಲೀಸ್ ಇಲಾಖೆಯ ಕಾನೂನು ಉಲ್ಲಂಘಿಸಿದ್ದಕ್ಕಾಗಿ, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಅಶಿಸ್ತು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಮಹಮ್ಮದ್ ಶರೀಫ್ ಅವರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ಕರ್ತವ್ಯದಿಂದ ಮುಂದಿನ ಆದೇಶ ತನಕ ಅಮಾನತು ಮಾಡಿ ಮಂಗಳೂರು ನಗರ ಕಮಿಷನರ್ ಶಶಿಕುಮಾರ್ ಆದೇಶ ಮಾಡಿದ್ದಾರೆ.