ಮಂಗಳೂರು, ಮಾ.22(DaijiworldNews/SM): ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯೂ ಸೇರಿದಂತೆ ವಿವಿಧ ಯೋಜನೆಗಳ ಅಡಿ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯಗಳನ್ನು ನೀಡುವಲ್ಲಿ ಶೂನ್ಯ ಸಾಧನೆ ಮಾಡಿದ ಜಿಲ್ಲೆಯ ಖಾಸಗಿ ಬ್ಯಾಂಕ್ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಸಂಬಂಧಿಸಿದ ಬ್ಯಾಂಕುಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಅವರು ಮಾ.22ರ ಮಂಗಳವಾರ ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ ರೂಪಿಸಿರುವ ವಿವಿಧ ಯೋಜನೆಗಳಡಿ ಸರ್ಕಾರಿ ಸ್ವಾಮ್ಯದ ಎಲ್ಲಾ ಬ್ಯಾಂಕುಗಳು ಅರ್ಹ ಫಲಾನುಭವಿಗಳಿಗೆ ಸಾಲಸೌಲಭ್ಯ ಹಾಗೂ ಸವಲತ್ತುಗಳನ್ನು ಒದಗಿಸುವ ಮೂಲಕ ಉತ್ತಮ ಸಾಧನೆ ಮಾಡಿವೆ. ಆದರೆ ಐಸಿಐಸಿಐ, ಹೆಚ್ಡಿಎಫ್ಸಿ ಮತ್ತು ಆಕ್ಸಿಸ್ ಬ್ಯಾಂಕ್ಗಳು ಶೂನ್ಯ ಸಾಧನೆ ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ವಿಫಲವಾಗಿವೆ ಎಂದರು.
ಜಿಲ್ಲೆಗೆ 2022-23ನೇ ಸಾಲಿಗೆ ಒಟ್ಟು 21,023 ಕೋಟಿ ರೂ.ಗಳ ಸಾಲ ಯೋಜನೆಯನ್ನು ನಿಗದಿ ಮಾಡಲಾಗಿದೆ. ಈ ಪೈಕಿ 14,223 ಕೋಟಿ ರೂ. ಆದ್ಯತಾ ವಲಯಕ್ಕೆ ಮೀಸಲಿರಿಸಲಾಗಿದೆ. ಸಾಲ ಮತ್ತು ಆದ್ಯತಾ ವಲಯಕ್ಕೆ ಮೀಸಲಿರಿಸಿದ ಗುರಿ ಸಾಧನೆಗೆ ಎಲ್ಲಾ ಬ್ಯಾಂಕ್ಗಳು ಶ್ರಮ ವಹಿಸಬೇಕು. ನಿಗದಿ ಪಡಿಸಲಾದ ಗುರಿ ಸಾಧಿಸಬೇಕು, ಇಲ್ಲದಿದ್ದಲ್ಲೀ ಆ ಬ್ಯಾಂಕುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಾಕೀತು ಮಾಡಿದರು.
ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯತನ ತೋರಲಾಗಿದೆ, ಈ ಬಾರಿಯು ಕೂಡ ನಿರಿಕ್ಷಿತ ಪ್ರಗತಿ ಸಾಧಿಸಿಲ್ಲ ಈ ಬ್ಯಾಂಕುಗಳಿಗೆ ನೋಟಿಸ್ ಜಾರಿ ಮಾಡಲಾಗುವುದು, ಪ್ರಸಕ್ತ ಹಣಕಾಸು ವರ್ಷದ ಮುಂದಿನ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ತೋರದಿದ್ದರೆ ಶಿಸ್ತುಕ್ರಮ ಅನಿವಾರ್ಯ ಎಂದವರು ಹೇಳಿದರು.
ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪ್ರವೀಣ್ ಮಾತನಾಡಿ, 2022-23ರ ಜಿಲ್ಲಾ ಸಾಲ ಯೋಜನೆಯಲ್ಲಿ ಶೇ.70ನ್ನು ಆದ್ಯತಾ ವಲಯಕ್ಕೆ ಮೀಸಲಿರಿಸಲಾಗಿದೆ. ಕೃಷಿಗೆ 6,651 ಕೋಟಿ ರೂ., ಎಂಎಸ್ಎಂಇ ಕ್ಷೇತ್ರಕ್ಕೆ 5,213 ಕೋಟಿ ರೂ., ವಸತಿಗೆ 1,462 ಕೋಟಿ ರೂ.ಶಿಕ್ಷಣ ಕ್ಷೇತ್ರಕ್ಕೆ 107 ಕೋಟಿ ಇತರ ಆದ್ಯತಾ ವಲಯಕ್ಕೆ 790 ಕೋಟಿ ನಿಗದಿಪಡಿಸಲಾಗಿದೆ. ಜಿಲ್ಲೆಯ ಎಲ್ಲ ರಾಷ್ಟ್ರೀಕೃತ, ಖಾಸಗಿ, ವಾಣಿಜ್ಯ, ಸಹಕಾರಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಗೆ ಅವುಗಳ ನಿರ್ವಹಣೆ ಮತ್ತು ಸಂಭಾವ್ಯತೆಯ ಆಧಾರದಲ್ಲಿ ಗುರಿ ಹಂಚಿಕೆ ಮಾಡಲಾಗಿದೆ ಎಂದರು.