ಮಂಗಳೂರು, ಮಾ 22 (DaijiworldNews/HR): ಸುರತ್ಕಲ್ ಟೋಲ್ ಗೇಟ್ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಸುರತ್ಕಲ್ ಎನ್ಐಟಿಕೆ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯು ಮಾರ್ಚ್ 22 ರಂದು ಹೆಜಮಾಡಿ ಟೋಲ್ ಗೇಟ್ ನಿಂದ ಸುರತ್ಕಲ್ ಟೋಲ್ ಗೇಟ್ ವರೆಗೆ "ಟೋಲ್ ಗೇಟ್ ಚಲೋ" ಎಂಬ ಪ್ರತಿಭಟನಾ ರ್ಯಾಲಿಯನ್ನು ನಡೆಸಿದ್ದಾರೆ.
ಹೆಜಮಾಡಿ ಟೋಲ್ ಗೇಟ್ ಬಳಿ ವಾಸಿಸುವ ಸಾರ್ವಜನಿಕರಿಗೆ ಟೋಲ್ ಫ್ರೀ ಪ್ರವೇಶ ನೀಡಬೇಕು ಎಂದು ಒತ್ತಾಯಿಸಿ ಹೆಜಮಾಡಿ ಟೋಲ್ ಗೇಟ್ ಬಳಿ ಟೋಲ್ ಗೇಟ್ ಚಲೋ ರ್ಯಾಲಿಯನ್ನು ಕಾಂಗ್ರೆಸ್ ಮುಖಂಡ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು.
ಈ ವೇಳೆ ಮುನೀರ್ ಕಾಟಿಪಳ್ಳ ಮಾತನಾಡಿ, ಟೋಲ್ ಗೇಟ್ ಚಲೋ ರ್ಯಾಲಿಯನ್ನು ಘೋಷಿಸಿದ ನಂತರ ಹಲವಾರು ಬೆಳವಣಿಗೆಗಳು ನಡೆದಿವೆ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಎನ್ಎಂಪಿಟಿಗೆ ಸ್ಥಳಾಂತರಿಸುವುದಾಗಿ ಹೇಳಿದರು. ಅವರ ಹೇಳಿಕೆಗಳಲ್ಲಿ ನಮಗೆ ನಂಬಿಕೆ ಇಲ್ಲ, ಇದು ಅಧಿಕೃತ ಸಭೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಈ ಹಿಂದೆ ಕೂಡ ಇಂತಹ ಹೇಳಿಕೆಗಳನ್ನು ನೀಡಿದ್ದರಿಂದ ನಾವು ಅವರನ್ನು ನಂಬುವ ಸ್ಥಿತಿಯಲ್ಲಿಲ್ಲ ಎಂದರು.
ಅಕ್ರಮ ಟೋಲ್ ಗೇಟ್ ಕುರಿತು ಸರಕಾರ, ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ಅವರ ಗಮನಕ್ಕೆ ತರಲು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಗ್ಗಟ್ಟಿನಿಂದ ಜಮಾಯಿಸಿದರು ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಕಾಲಮಿತಿಯೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಂಸದರ ಕಚೇರಿ ಚಲೋ, ಟೋಲ್ ಗೇಟ್ ರದ್ದುಪಡಿಸುವಂತೆ ಅಹೋರಾತ್ರಿ ಧರಣಿ ನಡೆಸುತ್ತೇವೆ.ಆದರೂ ಬೇಡಿಕೆ ಈಡೇರಿಸಲು ವಿಫಲರಾದರೆ ಕಾನೂನು ಉಲ್ಲಂಘನೆ ಮಾಡುತ್ತೇವೆ ಎಂದರು. ಮತ್ತು ಟೋಲ್ ಗೇಟ್ ರದ್ದುಗೊಳಿಸಲು ಕ್ರಮಕೈಗೊಳ್ಳಬೇಕು.
ಕೆಥೋಲಿಕ್ ಸಭಾದ ಮಾಜಿ ಅಧ್ಯಕ್ಷೆ ರೋಲ್ಫಿ ಡಿಕೋಸ್ತಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಾಜಿ ಶಾಸಕ ಅಭಯಚಂದ್ರ ಜೈನ್, ಮೊಹಿಯುದ್ದೀನ್ ಬಾವ, ಪಿ.ವಿ.ಮೋಹನ್, ರಾಜಶೇಖರ್ ಕೋಟ್ಯಾನ್, ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ, ನ್ಯಾಯವಾದಿ ದಿನೇಶ್ ಉಳ್ಳೆಪಾಡಿ, ಸಂತೋಷ್ ಬಜಾಲ್, ಬಿ.ಕೆ.ಇಮ್ತಿಯಾಜ್ ಮೊದಲಾದವರು ಉಪಸ್ಥಿತರಿದ್ದರು.