ಮಂಗಳೂರು, ಮಾ 22 (DaijiworldNews/DB): ಬಿಜೆಪಿಯವರು ಕಾಶ್ಮೀರ್ ಫೈಲ್ಸ್ ನೋಡುವ ಮುನ್ನ ಮಂಗಳೂರು ಫೈಲ್ಸ್ ನೋಡುವ ಅಗತ್ಯವಿದೆ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆಯಾಗಿ ಆರು ವರ್ಷವಾಯಿತು. ಇಲ್ಲಿವರೆಗೆ ಬಾಳಿಗಾ ಕುಟುಂಬಕ್ಕೆ ನ್ಯಾಯ ದೊರಕಿಲ್ಲ. ಬಿಜೆಪಿ ಕಾರ್ಯಕರ್ತರಾಗಿದ್ದ ಬಾಳಿಗಾ, ಪಕ್ಷಕ್ಕಾಗಿ ಸರ್ವ ರೀತಿಯಲ್ಲಿ ದುಡಿದಿದ್ದರು. ಕಾಂಗ್ರೆಸ್ 70 ವರ್ಷಗಳಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುವ ಮುನ್ನ ಅವರ ಏಳು ವರ್ಷಗಳ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬ ಬಗ್ಗೆ ಯೋಚಿಸಲಿ ಎಂದರು.
ಕಾಶ್ಮೀರ ಫೈಲ್ಸ್ ನೋಡುವುದಕ್ಕಿಂತ ಮುನ್ನ ಅವರು ಮಂಗಳೂರು ಫೈಲ್ಸ್ ನೋಡುವ ಅವಶ್ಯ ತುಂಬಾ ಇದೆ. ಮಂಗಳೂರು ಸೇರಿದಂತೆ ರಾಜ್ಯದಲ್ಲಿ ಹಲವು ಕೊಲೆ ಪ್ರಕರಣಗಳು ನಡೆದಿದ್ದು, ಆ ಕುಟುಂಬಗಳು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿವೆ. ಹರ್ಷ ಮತ್ತು ಬೆಳ್ತಂಗಡಿಯ ದಿನೇಶ್ ಅವರ ಕೊಲೆಯಾಗಿದೆ. ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲಾಗಿದೆ. ಆದರೆ, ದಿನೇಶ್ ಕುಟುಂಬಕ್ಕೆ ಕೇವಲ 8 ಲಕ್ಷ ರೂ. ನೀಡಲಾಗಿದೆ. ಯಾವ ಆಧಾರದ ಮೇಲೆ ಇಷ್ಟು ಕಡಿಮೆ ಪರಿಹಾರ ನೀಡಿರುವುದು ಎಂದವರು ಪ್ರಶ್ನಿಸಿದರು.
ದಿನೇಶ್ ಕೂಡಾ ಓರ್ವ ಹಿಂದೂ ಯುವಕ. ಆದರೆ ಆತನ ಮನೆಗೆ ಯಾವೊಬ್ಬ ಬಿಜೆಪಿ ನಾಯಕರೂ ಭೇಟಿ ನೀಡಿಲ್ಲ ಎಂದು ಇದೇ ವೇಳೆ ಅವರು ವಿಷಾದ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಇದುವರೆಗೆ ಹತ್ಯೆಯಾದವರ ಪಟ್ಟಿಯನ್ನು ಸಂಸದೆ ಶೋಭಾ ಕರಂದ್ಲಾಜೆ ಅವರು ಬಿಡುಗಡೆ ಮಾಡಿದ್ದಾರೆ. ಆದರೆ ಅದರಲ್ಲಿ ವಿನಾಯಕ ಬಾಳಿಗ ಹೆಸರು ಯಾಕಿಲ್ಲ ಎಂದು ಪ್ರಶ್ನಿಸಿದರು.