ಮೂಲ್ಕಿ, ಮಾ 22 (DaijiworldNews/MS): ನಗರದ ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಪುನರೂರು ಪೆಟ್ರೋಲ್ ಪಂಪ್ ಎದುರು ಟೂರಿಸ್ಟ್ ಕಾರು ಪಾರ್ಕ್ ಬಳಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಮೂಲತಃ ತಮಿಳುನಾಡಿನ ಕನ್ಯಾಕುಮಾರಿಯ ಪ್ರಸ್ತುತ ಬೆಳ್ಳಾಯರು ಗ್ರಾಮ ನಿವಾಸಿ ಎಂ. ಮುರುಗನ್ (36) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೆನ್ನಬೆಟ್ಟು ಗ್ರಾಮದ ಉಲ್ಲಂಜೆ ನಿವಾಸಿ ಹರೀಶ್ ಸಾಲ್ಯಾನ್ (37) ಎಂಬವರನ್ನು ಪುನರೂರು ಪೆಟ್ರೋಲ್ ಪಂಪ್ ಎದುರಿನ ಟೂರಿಸ್ಟ್ ಕಾರು ಪಾರ್ಕ್ ಬಳಿ ಮಾ.19 ರಂದು ರಾತ್ರಿ ಕೊಲೆ ಮಾಡಿದ್ದರು.ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ನಿರೀಕ್ಷಕರಾದ ಕುಸುಮಾಧರ ಅವರು ತನಿಖೆ ಆರಂಭಿಸಿದ್ದರು.
ಮಾರ್ಚ್ 19ರಂದು ಮೆನ್ನಬೆಟ್ಟು ಗ್ರಾಮದ ಉಲ್ಲಂಜೆ ನಿವಾಸಿ ಹರೀಶ್ ಸಾಲ್ಯಾನ್ ಹಾಗೂ ಎಂ. ಮುರುಗನ್ ಇಬ್ಬರೂ ಬಪ್ಪನಾಡು ದೇವಸ್ಥಾನಕ್ಕೆ ಬಂದಿದ್ದರು. ಅಲ್ಲಿಂದ ಮರಳುವಾಗ ದಾರಿಮಧ್ಯೆ ಮುಲ್ಕಿ ಪೇಟೆಯ ಪೆಟ್ರೋಲ್ ಬಂಕ್ ಬಳಿ ಅವರನ್ನು ಕೊಲೆಗೈಯ್ಯಲಾಗಿತ್ತು. ಕೊಲೆಯಾದ ಜಾಗದಲ್ಲಿ ದೊರೆತ ವಸ್ತುಗಳ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು.ಈ ಬಗ್ಗೆ ಆರೋಪಿ ಎಂ.ಮುರುಗನ್ ಬಗ್ಗೆ ಅನುಮಾನಗೊಂಡ ಪೊಲೀಸರು ಮಾರ್ಚ್ 21ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ ಆತ ಹಣಕಾಸಿನ ವ್ಯವಹಾರದ ದ್ವೇಷದಿಂದ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.