ಕಾಪು, ಮಾ. 21 (DaijiworldNews/SM): ಸೋಮವಾರ ಕಾಪು ಗುಡ್ಡೆಕೇರಿ ಸಲಾಫಿ ಮಸೀದಿ ಸಮೀಪ ಗುಜರಿ ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪ್ರಕರಣದಲ್ಲಿ ಮೃತರ ಸಂಖ್ಯೆ ಮೂರಕ್ಕೇರಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಇನ್ನೋರ್ವ ಯುವಕ ನಿಯಾಝ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಈ ಮೊದಲು ರಜಾಬ್ ಮಲ್ಲಾರ್ ಮತ್ತು ರಜಬ್ ಚಂದ್ರನಗರ ಸ್ಥಳದಲ್ಲಿಯೇ ಮೃತರಾಗಿದ್ದರೆ, ಇತರ ಮೂವರು ಗಂಭೀರ ಗಾಯಗೊಂಡಿದ್ದು, ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣೆಗೆ ಬಂದಿದ್ದ ಬೆಳಪು ಗ್ರಾ.ಪಂ. ಸದಸ್ಯ ಫಾಹಿಮ್ ತೀವ್ರಗಾಯೊಂಡು ಆಸ್ಪತ್ರೆಯಗೆ ದಾಖಲಾಗಿದ್ದಾರೆ.
ಅಗ್ನಿಶಾಮಕದ ಸತತ ಕಾರ್ಯಾಚರಣೆಯ ಬಳಿಕ ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಉಡುಪಿ ಅಗ್ನಿಶಾಮಕ ದಳ ಹಾಗೂ ಐಎಸ್ಪಿಆರ್ಎಲ್ನ ಅಗ್ನಿಶಾಮಕ ದಳದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ಅಕ್ಕಪಕ್ಕದ ಮನೆಗಳಿಗೆ ಹಬ್ಬುವುದನ್ನು ತಡೆಯುವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಗಿದೆ.
ಅಂಗಡಿಯಲ್ಲಿ ಗುಜರಿಗೆ ಬಂದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅವಘಡ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಇಬ್ಬರು ಸ್ಥಳದಲ್ಲಿಯೇ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದಾರೆ. ತೀವ್ರ ಗಾಯಗೊಂಡಿದ್ದ ನಿಯಾಝ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಕಾಪು ಪುರಸಭಾಧಿಕಾರಿ ವೆಂಕಟೇಶ ನಾವಡ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ.
ಕಾಪು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.