ಮಂಗಳೂರು, ಮಾ. 21 (DaijiworldNews/SM): ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಆರನೇ ಪುಣ್ಯತಿಥಿಯ ಅಂಗವಾಗಿ ಸೋಮವಾರದಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟವು ಕಾರ್ ಸ್ಟ್ರೀಟ್ನ ಶ್ರೀ ವೆಂಕಟರಮಣ ದೇವಸ್ಥಾನದಿಂದ ಕಲಾಕುಂಜದಲ್ಲಿರುವ ಆರ್ಟಿಐ ಕಾರ್ಯಕರ್ತ ದಿವಂಗತ ವಿನಾಯಕ ಬಾಳಿಗಾ ಅವರ ನಿವಾಸದವರೆಗೆ ಮೆರವಣಿಗೆ ನಡೆಸಿತು.
ವಿನಾಯಕ ಬಾಳಿಗಾ ಅವರ ಸಹೋದರಿಯರು ತಮ್ಮ ಸಹೋದರನಿಗೆ ನ್ಯಾಯ ನೀಡುವಂತೆ ಶ್ರೀ ವೆಂಕಟ್ರಮಣ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಮೆರವಣಿಗೆ ಪ್ರಾರಂಭವಾಯಿತು.
ಭಾರತೀಯ ವಿಚಾರವಾದಿಗಳ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಮಾತನಾಡಿ, ‘ದೇವಸ್ಥಾನದಲ್ಲಿನ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ್ದ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಹತ್ಯೆಯಾಗಿ ಆರು ವರ್ಷಗಳಾಗಿವೆ. ಕಲಾಕುಂಜ್ನಲ್ಲಿರುವ ಅವರ ನಿವಾಸದ ಬಳಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕಾಶ್ಮೀರದ ಕಡತಗಳನ್ನು ಮರೆತುಬಿಡಿ, ದೇವಾಲಯದ ಅಕ್ರಮಗಳಿಗೆ ಸಂಬಂಧಿಸಿದ ಹಲವಾರು ಜಿಬಿ ಸಾಕ್ಷ್ಯಗಳೊಂದಿಗೆ 'ಬಾಳಿಗಾ ಫೈಲ್ಗಳು' ಅಸ್ತಿತ್ವದಲ್ಲಿವೆ. ಬಾಳಿಗಾ ಅವರ ಕೊಲೆಯಾದ ಒಂದು ವರ್ಷದ ನಂತರ, ಅವರ ತಂದೆತಾಯಿಗಳು ತೀರಿಕೊಂಡರು. ಪುತ್ರ ಸಾವಿನ ಶೋಕದಿಂದ ಕೊರಗಿ ಪೋಷಕರು ಸಾವನ್ನಪ್ಪುವುದು ಕುಟುಂಬವನ್ನೇ ಕೊಂದಂತೆ ಎಂದರು.
ಇನ್ನು ವಿನಾಯಕ ಬಾಳಿಗ ಅವರು ಚುನಾವಣಾ ಸಮಯದಲ್ಲಿ ಬಿಜೆಪಿ ಪರ ನಿರಂತರ ಕೆಲಸ ಮಾಡುತ್ತಿದ್ದರು. ಇದುವರೆಗೂ ಬಾಳಿಗಾ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಇವರು ಯಾರೂ ಕೂಡ ಆಸಕ್ತಿ ತೋರಿಲ್ಲ. ಬಾಳಿಗಾ ಹತ್ಯೆ ಪ್ರಕರಣವನ್ನು ಎಸ್ಐಟಿಗೆ ಒಪ್ಪಿಸುವಷ್ಟು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಧೈರ್ಯವಿದೆಯೇ,’’ ಎಂದು ಪ್ರೊ.ನರೇಂದ್ರ ನಾಯಕ್ ಪ್ರಶ್ನಿಸಿದರು.
ಇನ್ನು 2016ರ ಮಾರ್ಚ್ 21ರಂದು ಮುಂಜಾನೆ ಕಲಾ ಕುಂಜ್ನಲ್ಲಿರುವ ಅವರ ನಿವಾಸದ ಬಳಿ ವಿನಾಯಕ್ ಬಾಳಿಗಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣವನ್ನು ಇನ್ನೂ ಬಗೆಹರಿಸಲಾಗಿಲ್ಲ ಮತ್ತು ಕೊಲೆಯ ಹಿಂದಿನ ಅಪರಾಧಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ.