ಮಂಗಳೂರು, ಮಾ 21 (DaijiworldNews/HR): ಕ್ಷಯರೋಗಿಗಳನ್ನು ಗುಣಪಡಿಸಲು ಅಧಿಕಾರಿಗಳು ರೂಪಿಸುವ ನೂತನ ಯೋಜನೆಗಳಿಗೆ ಜಿಲ್ಲಾಡಳಿತ ಅಗತ್ಯ ನೆರವು ಹಾಗೂ ಅನುದಾನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಷಯ ಹಾಗೂ ಎಚ್.ಐ.ವಿ ಸಂಬಂಧಿತ ಸಮನ್ವಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಕ್ಷಯಮುಕ್ತವಾಗಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಮುಖ್ಯವಾಗಿ ನಿಷ್ಠೆಯಿಂದ ಕೆಲಸ ಮಾಡಬೇಕು, ಆಸಕ್ತಿ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡಿದರೆ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ. ರೋಗಿಗಳ ಪರವಾಗಿ ಅಧಿಕಾರಿಗಳು ಯಾವುದೇ ಉತ್ತಮ ಯೋಜನೆ ರೂಪಿಸಿದರೂ, ಅದಕ್ಕೆ ಬೇಕಾದ ನೆರವು ಹಾಗೂ ಅನುದಾನ ನೀಡಲು ಜಿಲ್ಲಾಡಳಿತ ಸಿದ್ದವಿದೆ ಎಂದರು.
ಜಿಲ್ಲೆಯಲ್ಲಿರುವ ಕ್ಷಯರೋಗ ಪೀಡಿತರನ್ನು ನೇರವಾಗಿ ಭೇಟಿ ಮಾಡಿ, ಅವರ ಸೋಂಕಿನ ಹಂತ, ಆಹಾರ ಕ್ರಮ, ಆರ್ಥಿಕ ಸ್ಥಿತಿ-ಗತಿ, ಸರ್ಕಾರದ ಸೌಲಭ್ಯಗಳು ಅವರಿಗೆ ಸೂಕ್ತವಾಗಿ ತಲುಪುತ್ತಿರುವ ಬಗ್ಗೆ ಹಾಗೂ ಗುಣಮುಖರಾದ ರೋಗಿಗಳ ಅಂಕಿಅಂಶಗಳನ್ನು ಕಲೆ ಹಾಕಿ ಜಿಲ್ಲಾಡಳಿತಕ್ಕೆ ವರದಿ ನೀಡುವಂತೆ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ರೋಗಿಗಳ ವಿಷಯದಲ್ಲಿ ಯಾವುದೇ ಕಾರಣಕ್ಕೂ ಆಲಸ್ಯದ ನಡೆಯನ್ನು ಸಹಿಸುವುದಿಲ್ಲ ಎಂದ ಅವರು, ಅಧಿಕಾರಿಗಳು ಚುರುಕಾಗಿ ಸೋಂಕಿತರಿಗೆ ಸರ್ಕಾರ ನೀಡುವ ಸಹಾಯ ಧನ, ಪೌಷ್ಠಿಕ ಆಹಾರದ ಪಟ್ಟಣಗಳನ್ನು ಸರಿಯಾಗಿ ತಲುಪಿಸಿ ಅವರು ಸೌಲಭ್ಯಗಳಿಂದ ವಂಚಿತರಾಗದಂತೆ ಗಮನ ಹರಿಸಬೇಕು, ತಂಡವನ್ನು ರಚಿಸಿಕೊಂಡು ಕ್ಷಯರೋಗ ಪೀಡಿತರ ಬಗೆಗಿನ ಸಮಗ್ರ ವರದಿಗಾಗಿ ನೀಡುವಂತೆ ಅವರು ತಿಳಿಸಿದರು.
ಪಡಿತರ ಚೀಟಿ ಹೊಂದಿಲ್ಲದ ಕ್ಷಯರೋಗಿಗಳನ್ನು ಗುರುತಿಸಬೇಕು, ಅರ್ಹತೆಗನುಣವಾಗಿ ಶೀಘ್ರವಾಗಿ ಬಿ.ಪಿ.ಎಲ್. ಸೇರಿದಂತೆ ಪಡಿತರ ಚೀಟಿಗಳನ್ನು ಕೊಡಿಸಿಕೊಡಬೇಕು, ಜತೆಗೆ ಕ್ಷಯರೋಗದ ನಿರ್ಮೂಲನೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಅಧಿಕಾರಿಗಳು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳು ಅನುಸರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್, ಫಾದರ್ ಮುಲ್ಲರ್ ಆಸ್ಪತ್ರೆಯ ವಿಭಾಗ ಮುಖ್ಯಸ್ಥ ಡಾ. ಸೌರಭ್ ಕುಮಾರ್, ಕೆಪಾಸಿಟಿ ಬಿಲ್ಡಿಂಗ್ ಎಕ್ಸ್ಪರ್ಟ್ ಡಾ. ಎಲಿಜಬೆತ್, ವಕೀಲರಾದ ಹರಿಶ್ಚಂದ್ರ , ಮಾದಕ ವಸ್ತು ನಿಯಂತ್ರಣಾಧಿಕಾರಿ ಡಾ. ಶಂಕರ್ ನಾಯಕ್, ಕೌನ್ಸಿಲರ್ ಭವ್ಯ, ಖಾಸಗಿ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಇತರೆ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.