ಸುಬ್ರಹ್ಮಣ್ಯ, ಡಿ21(SS): ಇತಿಹಾಸ ಪ್ರಸಿದ್ಧ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದ್ದು, ಜಾತ್ರೋತ್ಸವದ ಕೊನೆಯ ಉತ್ಸವವಾಗಿ ರಾತ್ರಿ ನೀರಿನಲ್ಲಿ ಶ್ರೀ ದೇವರ ಬಂಡಿ ಉತ್ಸವ ನೆರವೇರಿದೆ. ಈ ವೇಳೆ ದೇಗುಲದ ಆನೆಯು ಮಕ್ಕಳೊಡನೆ ನೀರಾಟವಾಡಿ ಸಂಭ್ರಮಿಸಿದೆ.
ಗುರುವಾರ ರಾತ್ರಿ ಮಹಾಪೂಜೆಯ ಬಳಿಕ ಪಲ್ಲಕ್ಕಿ ಉತ್ಸವವು ನೀರಿನಲ್ಲಿ ನೆರವೇರಿದ್ದು, ಬಳಿಕ ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆದಿದೆ. ಈ ಉತ್ಸವದೊಂದಿಗೆ ಚಂಪಾ ಷಷ್ಠಿ ಉತ್ಸವಗಳು ಮುಕ್ತಾಯವಾಗಿದೆ. ಈ ಉತ್ಸವದಲ್ಲಿ ದೇಗುಲದ ಆನೆ ಮಕ್ಕಳೊಡನೆ ನೀರಾಟವಾಡಿದ್ದು ಎಲ್ಲರ ಗಮನ ಸೆಳೆದಿದೆ.
ಗಜರಾಣಿ ನೀರಿನಲ್ಲಿ ಹೊರಳಾಡಿ ಸಂತೋಷ ಪಡುವುದರೊಂದಿಗೆ ತನಗೆ ನೀರು ಹಾರಿಸಿದ ಪುಟಾಣಿ ಮಕ್ಕಳ ಮೇಲೆ ತನ್ನ ಕಾಲು ಹಾಗೂ ಸೊಂಡಿಲಿನಿಂದ ನೀರು ಎರಚಿ, ಮಕ್ಕಳೊಂದಿಗೆ ನೀರಾಟವಾಡಿದೆ. ನೀರಾಟದಲ್ಲಿ ದೇಗುಲದ ಸಿಬ್ಬಂದಿ ಮತ್ತು ಮಕ್ಕಳು ಭಾಗವಹಿಸಿದ್ದು, ನೀರ ಬಂಡಿ ಉತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಸ್ಥಗಿತವಾಗಿದ್ದ ಸರ್ಪ ಸಂಸ್ಕಾರ ಸೇವೆಗಳು ಇಂದಿನಿಂದ ನಡೆಯಲಿದೆ.