ಉಡುಪಿ, ಮಾ 21 (DaijiworldNews/MS): ಹಿಂದೂ ದೇವಸ್ಥಾನದ ಜಾತ್ರೆಗಳಲ್ಲಿ , ಹಬ್ಬಗಳಲ್ಲಿ ಮುಸ್ಲಿಂ ಸಮುದಾಯದ ಬೀದಿ-ಬದಿ ವ್ಯಾಪಾರ ಮಾಡಲು ಅವಕಾಶ ಕೊಡಿ ಎಂದು ಉಡುಪಿ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರು ಹಾಗೂ ಜಾತ್ರಾ ವ್ಯಾಪಾರಸ್ಥರ ಒಕ್ಕೂಟದ ಕಾರ್ಯದರ್ಶಿ ಮೊಹಮ್ಮದ್ ಆರೀಫ್ ವಿನಂತಿಸಿಕೊಂಡರು.
ಅವರು ಇಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, 'ಕಾಪು ಮಾರಿಗುಡಿ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಅಲ್ಲಿ ಫಲಕ ಹಾಕಲಾಗಿತ್ತು. ಈಗ ಪಡುಬಿದ್ರಿ ದೇವಸ್ಥಾನದಲ್ಲೂ ಆ ಪಲಕ ಹಾಕಲಾಗಿದೆ. ನಮ್ಮಿಂದ ಏನು ತಪ್ಪಾಗಿದೆ ಎಂಬುದು ಗೊತ್ತಿಲ್ಲ. ಇದುವರೆಗೆ ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಹಿಂದು- ಮುಸ್ಲಿಂರು ವ್ಯಾಪಾರ ಮಾಡುತ್ತಿದ್ದವು.
ಈ ಹಿಂದೆ ಎಲ್ಲಾ ಕಡೆ ದೇವಸ್ಥಾನದ ಜಾತ್ರೆಗಳಲ್ಲಿ ವ್ಯಾಪಾರ ಮಾಡುತ್ತಿದ್ದೆವು . ಮೊದಲು ಒಡಂಬಾಡೇಶ್ವರದಿಂದ ಆರಂಭವಾದ ನಿರ್ಬಂಧ ಈಗ ಪೆರ್ಡೂರು, ಪೆರ್ಣಂಕಿಲ ಪಡುಬಿದ್ರಿ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯವರಿಗೆ ಅಂಗಡಿ ಇಡಲು ಅನುಮತಿ ನೀಡುತ್ತಿಲ್ಲ.ಯಾವುದೋ ಸಂಘಟನೆಗಳ ಇದನ್ನು ಮಾಡುತ್ತಿವೆ. ಹಿಂದು ಬಾಂಧವರಿಗೆ ನೋವಾಗುವ ಕೆಲಸ ನಾವು ಎಂದೂ ಮಾಡಲ್ಲ. ದೇವಸ್ಥಾನದ ಆಡಳಿತ ಮಂಡಳಿ ನಮ್ಮನ್ನು ಮಾತುಕತೆಗೆ ಕರೆದರೆ ಹೋಗುತ್ತೇವೆ.
ಕೋವಿಡ್ ನಿಂದಾಗಿ ಯಾವುದೇ ಜಾತ್ರೆಗಳು ನಡೆಯುತ್ತಿರಲಿಲ್ಲ. ಈಗ ಸ್ವಲ್ಪ ಚೇತರಿಕೆ ಕಾಣುತ್ತಿದೆ. ಈಗ ಯಾವುದೋ ಕಾರಣಕ್ಕೆ ನಮ್ಮನ್ನು ವ್ಯಾಪಾರ ಮಾಡದಂತೆ ನಮ್ಮನ್ನು ತಡೆದಿದ್ದಾರೆ. ನಮಗೆ ಹಿಂದಿನಂತೆಯೇ ವ್ಯಾಪಾರ ಮಾಡಲು ಅವಕಾಶ ಕೊಡಿ ಎಂದು ದೇವಸ್ಥಾನದ ಸಮಿತಿಯಲ್ಲಿ ಕೇಳಿಕೊಂಡಿದ್ದೇವೆ ಎಂದು ಹೇಳಿದರು.
ತೌಫಿಕ್, ಮೊಹಮ್ಮದ್ ಇಬ್ರಾಹಿಂ, ಉಪಾಧ್ಯಕ್ಷ, ಯಾಸೀನ್ ಕೆಮ್ಮಣ್ಣು, ಹಮೀದ್ ನೇಜಾರು ಉಪಸ್ಥಿತರಿದ್ದರು.