ಮಂಗಳೂರು, ಡಿ21(SS): ನಗರದ ಮಲ್ಲಿಕಟ್ಟೆ ವೃತ್ತವನ್ನು ಪ್ರತಿಷ್ಠಿತ ಬಿಲ್ಡರ್ ಮತ್ತು ಡೆವಲಪರ್ಸ್ ಸಂಸ್ಥೆ ಭಂಡಾರಿ ಬಿಲ್ಡರ್ಸ್ ಅಭಿವೃದ್ದಿಪಡಿಸಿದ್ದು, ಈ ವೃತ್ತವು ತುಳು ಐತಿಹ್ಯವನ್ನು ನೆನಪಿಸುತ್ತಿದೆ. ನವೀಕೃತಗೊಂಡಿರುವ ಈ ವೃತ್ತದ ಉದ್ಘಾಟನಾ ಕಾರ್ಯಕ್ರಮ ಡಿ.22ರಂದು ಸಂಜೆ 7 ಗಂಟೆಗೆ ನಡೆಯಲಿದೆ ಎಂದು ಭಂಡಾರಿ ಬಿಲ್ಡರ್ಸ್ ನ ಕಂಪೆನಿಯ ಮುಖ್ಯಸ್ಥರಾದ ಲಕ್ಷ್ಮೀಶ್ ಭಂಡಾರಿ ತಿಳಿಸಿದ್ದಾರೆ.
ನಗರದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ವಸತಿ ಹಾಗೂ ನಗರಾಭಿವೃದ್ದಿ ಸಚಿವ ಯು.ಟಿ ಖಾದರ್ ಮತ್ತು ಮೇಯರ್ ಭಾಸ್ಕರ್ ಮೊಯಿಲಿ ಉದ್ಘಾಟಿಸಲಿದ್ದಾರೆ ಎಂದು ಹೇಳಿದ್ದಾರೆ.
ದೇಶ ವಿದೇಶದಲ್ಲಿ ನೆಲೆಸಿರುವ ಹಲವಾರು ಮಂದಿ ನಮ್ಮೂರಿಗೆ ಏನಾದರೂ ಉದಾರ ಮನಸ್ಸಿನಿಂದ ಕೊಟ್ಟರೆ ದಕ್ಷಿಣ ಕನ್ನಡ ಸುಂದರವಾಗಿ ಮೂಡಿ ಬರುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಂಡಾರಿ ಬಿಲ್ಡರ್ಸ್ ಕಂಪೆನಿಯು ತನ್ನ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ಈ ಕೊಡುಗೆ ನೀಡಿದೆ. ವೃತ್ತದ ಕಲಾಕೃತಿಯನ್ನು ರಾಜೇಂದ್ರ ಕೇದಿಗೆ ರಚಿಸಿದ್ದಾರೆ. ಶಿಲಾ ಮಂಟಪದ ಕೆಲಸವನ್ನು ಕಾರ್ಕಳದ ವಿಜಯ ಶಿಲ್ಪಾ ಕಲಾ ಶಾಲೆಯ ಸತೀಶ್ ಆಚಾರ್ಯ ರಚಿಸಿದ್ದಾರೆ. ತುಳು ಹಾಗೂ ಇತರ ಸಾಹಿತ್ಯದ ಉಲ್ಲೇಖಗಳನ್ನು ತುಳು ಅಧ್ಯಯನ ಕೇಂದ್ರದ ಡಾ. ಸಾಯಿಗೀತಾ ಹೆಗ್ಡೆ ಹಾಗೂ ತುಳುನಾಡು ಟ್ರಸ್ಟ್ ನ ಜಿವಿಎಸ್ ಉಳ್ಳಾಲ್ ನೀಡಿದ್ದಾರೆ.