ಮಂಗಳೂರು, ಮಾ 21 (DaijiworldNews/MS): ಮಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಕೊಲೆ ನಡೆದು ಆರು ವರ್ಷವಾಗಿದ್ದು, ಈ ಹಿನ್ನಲೆಯಲ್ಲಿ ಅವರ ಮನೆಗೆ ಸಿಪಿಎಂ ಪಾಲಿಟ್ ಬ್ಯುರೋ ಸದಸ್ಯೆ ಬೃಂದಾ ಕಾರಟ್ ಭೇಟಿ ನೀಡಿ ಬಾಳಿಗಾ ಸೋದರಿಯರಿಗೆ ದೈರ್ಯ ತುಂಬಿದ್ದಾರೆ.
ಮಾ.21ರ ಸೋಮವಾರ ಭೇಟಿಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ ಅವರು, ವಿನಾಯಕ ಬಾಳಿಗಾ ಕೊಲೆಯಾಗಿ ಆರು ವರ್ಷ ಕಳೆದರೂ ಅವರ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ ಆಡಳಿತ ಪಕ್ಷದ ನಾಯಕರೇ ಆರೋಪಿಗಳಿಗೆ ಬೆಂಬಲ ಮಾಡುತ್ತಿದ್ದಾರೆ.ಪೊಲೀಸರು ಯಾವ ರೀತಿ ತನಿಖೆ ನಡೆಸುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ.ಬಾಳಿಗಾ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಎಸ್ಐಟಿ ನೇಮಕ ಆಗಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ಮೋದಿ ಜೊತೆಗೆ ಫೋಟೋ ಇಟ್ಟುಕೊಂಡವರು ಪ್ರಕರಣದಲ್ಲಿ ಆರೋಪಿಯಾಗಿದ್ದು,ಇದಕ್ಕಾಗಿ ರಾಜ್ಯದ ಆಡಳಿತ ಪಕ್ಷ ಆರೋಪಿಗಳ ರಕ್ಷಣೆಗೆ ನಿಂತಿದೆಯೇ ಎಂಬ ಪ್ರಶ್ನೆಯಿದೆ .ನಾವು ಇದರ ಬಗ್ಗೆ ಬೆಂಗಳೂರಿನಲ್ಲಿ ಧ್ವನಿ ಎತ್ತಲಿದ್ದು ನ್ಯಾಯಕ್ಕಾಗಿ ಸರಕಾರಕ್ಕೆ ಆಗ್ರಹಿಸಲಿದ್ದೇವೆ.ವಿನಾಯಕ ಬಾಳಿಗಾ ಕುಟುಂಬದ ಜೊತೆಗೆ ನಾವು ಇದ್ದೇವೆ ಎಂಬುದನ್ನು ತೋರಿಸುತ್ತೇವೆ. ನ್ಯಾಯದ ಹೋರಾಟದಲ್ಲಿ ಕುಟುಂಬದೊಂದಿಗೆ ಸಿಪಿಎಂ ಇರಲಿದೆ ಎಂದು ಭರವಸೆ ನೀಡಿದರು.
ಸಿಪಿಎಂ ರಾಜ್ಯ ಮುಖಂಡರಾದ ಕೆ ನೀಲಾ, ಕೆ ಪ್ರಕಾಶ್, ಗುರುಶಾಂತ್, ವಿಚಾರವಾದಿ ಪ್ರೊ. ನರೇಂದ್ರ ನಾಯಕ್, ನ್ಯಾಯವಾದಿ ಆಶಾ ನಾಯಕ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಎಂ ಜಿಲ್ಲಾ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ಡಾ. ಕೃಷ್ಣಪ್ಪ ಕೊಂಚಾಡಿ ಉಪಸ್ಥಿತರಿದ್ದರು.
2016ರ ಮಾ. 21ರಂದು ಮಂಗಳೂರಿನ ಕೊಡಿಯಾಲ್ಬೈಲ್ನಲ್ಲಿ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಆ ದಿನ ಬೆಳಗಿನ ಜಾವ ನಗರದ ಬೆಸೆಂಟ್ ಕಾಲೇಜಿನ ಸಮೀಪದ ಪಿವಿಎಸ್ ಕಲಾಕುಂಜದ ಪಕ್ಕದ ಓಣಿಯಲ್ಲಿ ವಿನಾಯಕ ಪಾಂಡುರಂಗ ಬಾಳಿಗ ಅವರ ಹತ್ಯೆ ನಡೆದಿತ್ತು. ವಿನಾಯಕ ಪಾಂಡುರಂಗ ಬಾಳಿಗರವರು ಎಂದಿನಂತೆ ಮುಂಜಾನೆ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ತನ್ನ ಸ್ಕೂಟರ್ ನಲ್ಲಿ ಮನೆಯಿಂದ ಹೊರಟು ಸುಮಾರು 75 ಮೀಟರ್ ದೂರ ಹೋಗುವಷ್ಟರಲ್ಲಿ ಬಾಳಿಗರನ್ನು ತಡೆದು ನಿಲ್ಲಿಸಿದ ಅಪರಿಚಿತ ವ್ಯಕ್ತಿಗಳು ಅವರನ್ನು ತಲವಾರಿನಿಂದ ಕಡಿದು, ಬಂದ ಬೈಕ್ ನಲ್ಲಿ ಪರಾರಿಯಾಗಿದ್ದರು. ದಾಳಿಯಿಂದ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿನಾಯಕ ಪಾಂಡುರಂಗ ಬಾಳಿಗರನ್ನು ಜ್ಯೋತಿಯ ಕೆ.ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸುತ್ತಿದ್ದಾಗ ಅವರು ದಾರಿಯಲ್ಲೇ ಮೃತಪಟ್ಟಿದ್ದರು. ದೇವಸ್ಥಾನ ಕಮಿಟಿಯ ಭ್ರಷ್ಟಾಚಾರ ಪ್ರಶ್ನೆ ಮಾಡಿದ್ದಕ್ಕೆ ಬಾಳಿಗಾನನ್ನು ಕೊಲೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.