ಮಂಗಳೂರು, ಮಾ 20 (DaijiworldNews/DB): ನವದೆಹಲಿಯಲ್ಲಿ ರೋಲರ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆ ಆಯೋಜಿಸಿದ್ದ 59ನೇ ರಾಷ್ಟ್ರ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರಿನ ತನ್ಮಯ್ ಕೊಟ್ಟಾರಿ ಎರಡು ಬೆಳ್ಳಿ ಪದಕ ಗೆದ್ದಿದ್ದಾರೆ.
ಅವರು ದೇರೆಬೈಲ್ ನ ಮೋಹನ್ ಕೊಟ್ಟಾರಿ-ಸುನಿತಾ ಮೋಹನ್ ದಂಪತಿಯ ಪುತ್ರ. ಕೆನರಾ ಸಿಬಿಎಸ್ಇ ಶಾಲೆಯಲ್ಲಿ 8ನೇ ಗ್ರೇಡ್ ವಿದ್ಯಾರ್ಥಿ.
ಮೂರೂವರೆ ವರ್ಷದವನಿದ್ದಾಗಲೇ ತನ್ಮಯ್ ರೋಲರ್ ಸ್ಕೇಟಿಂಗ್ ನಲ್ಲಿ ವಿಶೇಷ ಆಸಕ್ತಿ ಹೊಂದಿದ್ದ. ಈವರೆಗೆ ಜಿಲ್ಲಾ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಸುಮಾರು 75ಕ್ಕೂ ಹೆಚ್ಚು ಪದಕಗಳನ್ನು ತನ್ಮಯ್ ಗಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಚಾಂಪಿಯನ್ ಶಿಪ್ ನ್ನು ಸತತ ಆರು ಬಾರಿ ಪಡೆದಿದ್ದರು. ದಸರಾ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಎರಡು ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು. ಅಲ್ಲದೆ, ರಾಜ್ಯ ಮತ್ತು ದಕ್ಷಿಣ ಭಾರತ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದರು.
ಪಾಂಡಿಚೇರಿಯಲ್ಲಿ 2017 ಮೇ ತಿಂಗಳಲ್ಲಿ ನಡೆದ ಅಖಿಲ ಭಾರತ ಮುಕ್ತ ರಾಷ್ಟ್ರ ಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಮೂರು ಚಿನ್ನದ ಪದಕ ಗೆದ್ದು ರಾಷ್ಟ್ಟೀಯ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು. ರಾಷ್ಟ್ರ ಮಟ್ಟದಲ್ಲಿ ಇಲ್ಲಿಯವರೆಗೆ ಮೂರು ಚಿನ್ನದ ಪದಕ, ಎರಡು ಬೆಳ್ಳಿ ಪದಕ ಗಳಿಸಿದ್ದಾರೆ. ರಾಜ್ಯ ಮಟ್ಟದಲ್ಲಿ 16 ಮತ್ತು ದಕ್ಷಿಣ ವಲಯ ಮಟ್ಟದಲ್ಲಿ 12ಪದಕ ಗೆದ್ದಿದ್ದಾರೆ. ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನಲ್ಲಿ ಮೋಹನ್ ದಾಸ್ ಕೆ. ಅವರು ತನ್ಮಯ್ ಗೆ ತರಬೇತಿ ನೀಡುತ್ತಿದ್ದಾರೆ.