ಮಂಗಳೂರು, ಮಾ 20 (DaijiworldNews/DB): ಸಿದ್ಧರಾಮಯ್ಯ ಅವರು 5 ವರ್ಷ ಕಾಲ ಮುಖ್ಯಮಂತ್ರಿಯಾಗಿ ಅನುಭವವುಳ್ಳವರು. ಬಾಯಿಗೆ ಬಂದಂತೆ ಮಾತನಾಡಿ ಅವರ ಮೇಲಿರುವ ಒಳ್ಳೆಯ ಭಾವನೆಯನ್ನು ಹಾಳು ಮಾಡಿಕೊಳ್ಳದಿರಲಿ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸಲಹೆ ಮಾಡಿದ್ದಾರೆ.
ಕುತ್ಯಾರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾನುವಾರ ಮಾತನಾಡಿದ ಅವರು, ಗೋದ್ರಾದಲ್ಲಿ ಮುಸ್ಲಿಮರು ನಡೆಸಿದ ಅತ್ಯಾಚಾರವನ್ನು ನಾಗರಿಕ ಸಮಾಜ ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು ಒಮ್ಮೆ ಗೋದ್ರಾಕ್ಕೆ ಭೇಟಿ ನೀಡಿ ರೈಲಿನಲ್ಲಿ ಬೆಂಕಿ ಹಾಕಿ ಸಾಯಿಸಲ್ಪಟ್ಟವರ ಮನೆಗೆ ಹೋಗಿ ಬರಲಿ ಎಂದು ಅವರು ಸವಾಲು ಹಾಕಿದರು.
ಹಿಂದೂ ಸಮಾಜವನ್ನು ಹೀಯಾಳಿಸುವ ಕೆಲಸ ಮಾಡುವುದನ್ನು ಸಿದ್ಧರಾಮಯ್ಯ ಅವರು ಮೊದಲು ನಿಲ್ಲಿಸಬೇಕು. ಹಿಂದೂ ಸಮಾಜ ಉಳಿದರೆ ಜಗತ್ತು ಉಳಿಯುತ್ತದೆ ಎಂಬುದನ್ನು ಅವರು ಮನಗಾಣಬೇಕು. ಹಿಜಾಬ್ ಧರಿಸುವಿಕೆ ಅವರಿಗೆ ದೊಡ್ಡ ವಿಷಯವಾಗಲಿಲ್ಲ. ಆದರೆ ಕೇಸರಿ ಶಾಲು ಧರಿಸಿದ್ದರ ಬಗ್ಗೆ ಮಾತನಾಡಲು ಶುರು ಮಾಡಿದರು. ಇದೀಗ ಈ ವಿವಾದವನ್ನು ಗೋದ್ರಾ ವಿಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹಿಜಾಬ್ ಬಗ್ಗೆ ಮಾತನಾಡಿದರೆ ಮತ ಬ್ಯಾಂಕ್ ಕಳೆದುಕೊಳ್ಳುವ ಭಯ ಅವರನ್ನು ಕಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.