ಮಂಗಳೂರು, ಮಾ 20 (DaijiworldNews/DB): ಮೂಲ್ಕಿ ಬಸ್ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ವ್ಯಕ್ತಿಯೋರ್ವನ ಶವ ಪತ್ತೆಯಾಗಿದ್ದು, ಆತನ ಮುಖ ಸಂಪೂರ್ಣ ನಜ್ಜುಗುಜ್ಜಾಗಿದೆ.
ಮೃತ ವ್ಯಕ್ತಿಯನ್ನು ಕಾರ್ಕಳದ ಮುಂಡ್ಕೂರಿನ ಕಟ್ಟಡ ನಿರ್ಮಾಣ ಕಾರ್ಮಿಕ ಹರೀಶ್ ಸಾಲ್ಯಾನ್ (37) ಎಂದು ಗುರುತಿಸಲಾಗಿದೆ.
ಮೂಲ್ಕಿ ಪೊಲೀಸರು ಬೆಳಗ್ಗೆ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಮುಖಕ್ಕೆ ಕಲ್ಲಿನಿಂದ ಜಜ್ಜಿರುವುದು ಗೊತ್ತಾಗಿದ್ದು, ಇದೊಂದು ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ.
ಈ ವ್ಯಕ್ತಿಯು ಶನಿವಾರ ರಾತ್ರಿ ಬಪ್ಪನಾಡು ದೇವಸ್ಥಾನ ಭೇಟಿಗೆಂದು ಆಗಮಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯ ಕಿಸೆಯಲ್ಲಿದ್ದ ಮೊಬೈಲ್ ಮತ್ತು ಪರ್ಸ್ ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ.