ಸುಳ್ಯ/ಕಡಬ/ಬೆಳ್ತಂಗಡಿ, ಮಾ 20 (DaijiworldNews/HR): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕು ಸೇರಿದಂತೆ ಹಲವೆಡೆ ಮಾ.19ರ ಶನಿವಾರ ರಾತ್ರಿ ಸಿಡಿಲು, ಗುಡುಗು ಸಹಿತ ಭಾರಿ ಮಳೆಯಾಗಿದೆ.
ಸುಳ್ಯ ತಾಲೂಕಿನ ಉಬರಡ್ಕ, ಎಣ್ಮೂರು, ಕೊಲ್ಲಮೊಗ್ರು, ನೆಲ್ಲೂರು, ಕೆಮ್ರಾಜೆ, ಮೆಟ್ಟಿನಡ್ಕ, ಕರಿಕ್ಕಳ, ಪೈಕ, ಪಂಜಿಕಲ್ಲು, ಎಲಿಮಲೆ, ಚೊಕ್ಕಾಡಿ, ಶ್ರೇಣಿ, ಕಳಂಜ, ಕಲ್ಮಡ್ಕ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ, ರೆಂಜಿಲಾಡಿ, ಇಚ್ಲಂಪಾಡಿ, ಕೊಣಾಜೆಯಲ್ಲಿ ಉತ್ತಮ ಮಳೆಯಾಗಿದೆ. ಶನಿವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ನಂತರ ಮಳೆ ಸುರಿದಿದೆ.
ಇನ್ನು ಭಾರೀ ಗಾಳಿಗೆ ಕಲ್ಮಡದಲ್ಲಿ ಕೃಷಿಕ ಸುರೇಶ್ಚಂದ್ರ ಎಂಬುವವರಿಗೆ ಸೇರಿದ 150ಕ್ಕೂ ಹೆಚ್ಚು ಅಡಕೆ ಮರಗಳು ಧರೆಗುರುಳಿವೆ.
ಶುಕ್ರವಾರ ರಾತ್ರಿ ಸುರಿದ ಮಳೆ ಮತ್ತು ಗಾಳಿಗೆ ಕಳೆಂಜದ ನಂದಗೋಕುಲ ಗೋ ಶಾಲೆಗೆ ಅಪಾರ ಹಾನಿಯಾಗಿದೆ. ಕೆಲವು ಚಾವಣಿಯ ಶೀಟ್ಗಳು ಗಾಳಿಗೆ ಹಾರಿಹೋದರೆ ಇನ್ನು ಕೆಲವು ತುಂಡಾಗಿ ಜಾನುವಾರುಗಳ ಮೇಲೆ ಬಿದ್ದಿವೆ. ಎಂಟಕ್ಕೂ ಹೆಚ್ಚು ಜಾನುವಾರುಗಳು ಗಾಯಗೊಂಡಿವೆ. 5 ರಿಂದ 7 ಲಕ್ಷ ರೂಪಾಯಿ ನಷ್ಟ ಆಗಿರಬಹುದು ಎಂದು ಅಂದಾಜಿಸಲಾಗಿದೆ. ತಹಶೀಲ್ದಾರ್ ಮಹೇಶ್ ಜೆ ಅವರಿಗೆ ಮಾಹಿತಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ನಾರಾವಿ-ಮರೋಡಿ ರಸ್ತೆ ಮಧ್ಯೆ ಮರವೊಂದು ಉರುಳಿ ರಸ್ತೆಗೆ ಬಿದ್ದಿದ್ದು, ಹುಣ್ಸೆಕಟ್ಟೆ ನಿವಾಸಿ ಅಶೋಕ್ ರೈ ಪುಂಡಿಕ್ಕು ಎಂಬುವವರ ನೂರಾರು ಅಡಕೆ ಮರಗಳು ಮತ್ತು ರಬ್ಬರ್ ಮರಗಳು ನಾಶವಾಗಿವೆ.
ಕಾರ್ಕಳ ತಾಲೂಕಿನ ಹಲವೆಡೆ ಭಾರೀ ಗಾಳಿ ಸಹಿತ ಮಳೆಯಾಗಿದ್ದು, ಹಲವೆಡೆ ಮರಗಳು ಬಿದ್ದಿದ್ದು, ಪರಿಹಾರ ಕಾರ್ಯ ಪ್ರಗತಿಯಲ್ಲಿದೆ.