ಪುತ್ತೂರು, ಮಾ 20 (DaijiworldNews/DB): ಕಬಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಲ್ಯಾಪ್ ಟಾಪ್ ಕಳವು ಮಾಡಿದ ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಮಂಗಳೂರು ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಸಲುವಾಗಿ ಪುತ್ತೂರು ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮಾರಾಟ ಮಾಡಿದ ಲ್ಯಾಪ್ ಟಾಪ್ ನ್ನು ಅಂಗಡಿ ಮಾಲೀಕನಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಕಬಕ ಹಿಪ್ರಾ ಶಾಲೆಯಿಂದ 2020ರ ಫೆಬ್ರವರಿ 12ರ ಸಂಜೆ 4.30ರಿಂದ ಫೆಬ್ರವರಿ 13ರ ಬೆಳಗ್ಗೆ 8.30ರೊಳಗೆ 24,990 ರೂ. ಮೌಲ್ಯದ ಲ್ಯಾಪ್ ಟಾಪ್ ಕಳವಾಗಿರುವ ಬಗ್ಗೆ ಶಾಲೆಯ ಮುಖ್ಯ ಗುರು ಸುಲೋಚನಾ ಕೆ. ಅವರು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಅವಧಿಯಲ್ಲಿ ಶಾಲೆಯ ಎಲ್ಲಾ ಕೊಠಡಿಗಳಿಗೆ ಬೀಗ ಹಾಕಲಾಗಿದ್ದರೂ, ಬೀಗ ಮುರಿದು ಕಪಾಟಿನ ಬಾಗಿಲು ತೆರೆದು ಎಲ್ಲಾ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿ, ಅದೇ ಕೋಣೆಯ ಸೆಲ್ಫ್ ಮೇಲಿದ್ದ ಲೆನೋವಾ ಬ್ರಾಂಡ್ ನ ಲ್ಯಾಪ್ ಟಾಪ್ ಕಳವು ಮಾಡಿ ಹೋಗಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿತ್ತು.
ಶಿಕ್ಷಕಿ ದೂರಿನನ್ವಯ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಮಂಗಳೂರು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2020ರ ಎಪ್ರಿಲ್ 12ರಂದು ದಸ್ತಗಿರಿಯಾಗಿದ್ದ ಮಂಜನಾಡಿಯ ಮೊಹಮ್ಮದ್ ಅಬ್ದುಲ್ ಫಯಾನ್ ಎಂಬವನನ್ನು ವಿಚಾರಿಸಿದಾಗ ತನ್ನ ಸ್ನೇಹಿತ ಸುಹೇಬ್ ನೊಂದಿಗೆ ಸೇರಿ ಲ್ಯಾಪ್ ಟಾಪ್ ಕಳವು ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದ. ಅಲ್ಲದೆ, ಮಂಗಳೂರಿನ ಅಂಗಡಿಯೊಂದಕ್ಕೆ ಮಾರಾಟ ಮಾಡಿರುವುದಾಗಿ ಹೇಳಿದ್ದ.
ಇದೀಗ ಬೆಳಗಾವಿ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯನ್ನು ಬಾಡಿ ವಾರೆಂಟ್ ಮುಖೇನ ನ್ಯಾಯಾಲಯಕ್ಕೆ ಹಾಜರುಪಡಿಸಲು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಬೆಳಗಾಂ ಜಿಲ್ಲಾ ನ್ಯಾಯಾಲಯದಿಂದ ಮಾರ್ಚ್ 18ರಂದು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. 5 ದಿನಗಳ ಕಾಲ ಪೊಲೀಸ್ ಭದ್ರತೆಯಲ್ಲಿ ಆತನನ್ನು ತನಿಖೆ ನಡೆಸಿ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಅಲ್ಲದೆ ಆತ ನೀಡಿದ ಹೇಳಿಕೆಯಂತೆ ಲ್ಯಾಪ್ ಟಾಪ್ ಮಾರಾಟ ಮಾಡಿದ ಅಂಗಡಿಗೆ ತೆರಳಿ ಶನಿವಾರ ಲ್ಯಾಪ್ ಟಾಪ್ ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪುತ್ತೂರು ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.