ಕಾರ್ಕಳ, ಮಾ 19 (DaijiworldNews/HR): ನಿರಂತರತೆ ವ್ಯಕ್ತಿತ್ವವನ್ನು ಬೆಳೆಸಿದಾಗ ಸಮಾಜ ಮುನ್ನೆಡೆಯಲು ಸಾಧ್ಯ. ನಿನ್ನೆಯಿಂದ ಕಲಿಯಿರಿ. ಇವತ್ತಿಗಾಗಿ ಬದುಕಿರಿ. ನಾಳೆಗಾಗಿ ಬದುಕು ನೋಡಿರಿ ಎಂಬ ಸಂದೇಶವನ್ನು ಭೂಮಂಡಲದಲ್ಲಿ ಇರುವ ಸೂರ್ಯನು ಜಗದಲ್ಲಿ ಇರುವ ಮಾನವನಿಗೆ ನೀಡುತ್ತಿದ್ದಾನೆ. ಅಂತಹ ಸಂದೇಶವನ್ನು ಪ್ರತಿಯೊಬ್ಬರು ತನ್ನ ಜೀವನದಲ್ಲಿ ಅನುಸರಿಸಬೇಕು ಅಗ ಜೀವೋತ್ಸವ ತರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹೇಳಿದರು.
ಕಾರ್ಕಳ ಉತ್ಸವ 9ನೇ ದಿನದಂದು ಸ್ವರಾಜ್ ಮೈದಾನದಲ್ಲಿ ಆಯೋಜಿಸಿದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವನಾಗಿದ್ದ ಸಂದರ್ಭದಲ್ಲಿ ನಾನು ಕಾರ್ಕಳ ಉತ್ಸವ ಮಾಡಲಿಲ್ಲ. ಪಟ್ಟದಕಲ್ಲು ಉತ್ಸವ(ಬಾಗಲಕೋಟೆ), ಹಂಪಿಯ ಉತ್ಸವ, ನವರಸ ಉತ್ಸವ(ಬಿಜಾಪುರ),ಕರಾವಳಿ ಉತ್ಸವ, ಹೊಯ್ಸಳ ಉತ್ಸವ ಮಾಡಿದ್ದೇನೆ. ಪಟ್ಟದಕಲ್ಲಿನಲ್ಲಿ ನಡೆದ ಉತ್ಸವದಲ್ಲಿ ಬೀಮ್ಜೋಷಿಯವರ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ನೆರೆದಿದ್ದರು. ಉತ್ಸವದಿಂದ ಜನರಲ್ಲಿ ಉತ್ಸಾಹ ಜೊತೆಗೆ ಚೈತನ್ಯ ನೀಡುತ್ತದೆ ಎಂದರು.
ಕಾರ್ಕಳದ ಇತಿಹಾಸ, ಪರಂಪರೆಯನ್ನು ಸಾಹಿತ್ಯಕ ಬಾಷೆಯಲ್ಲಿ ವಿವರಿಸಿದ ವೀರಪ್ಪ ಮೊಯಿಲಿ, ಕಾರ್ಕಳದ ಪ್ರತಿಯೊಂದು ಆರಾಧನೆಯ ಕೇತ್ರಗಳನ್ನು ಉಲ್ಲೇಖಿಸಿ, ಕಾರ್ಕಳ ಶಾಂತಿ, ಸಂಸ್ಕೃತಿಯ ಕ್ಷೇತ್ರ. ಎಲ್ಲ ಉತ್ಸವಗಳಿಗೆ ಬೀಡು. ಅದಕ್ಕೆ ಸಾಂಸ್ಕೃತಿಕ ಸ್ವರೂಪವನ್ನು ಸಚಿವ ಸುನೀಲ್ಕುಮಾರ್ ನೀಡಿದ್ದಾರೆ ವಿಶ್ಲೇಷಿಸಿದ್ದರು.
ಕಾರ್ಕಳದವರಿಗೆ ಮಂತ್ರಿಗಳಾಗುವ ಭಾಗ್ಯಗಳು ಹಲವು ಬಾರಿ ಎದುರಾಗಿದೆ ಎ.ಬಿ ಶೆಟ್ಟಿ,ಕೆ.ಕೆ,ಹೆಗ್ಡೆ, ನಾನು ಮಂತ್ರಿಯಾದೆ, ಮುಖ್ಯಮುಖ್ಯಯಾದೆ. ಆದರೆ ಸುನೀಲ್ಗೆ ಯಾಕೆ ಮಂತ್ರಿಯಾಗಿಲ್ಲ ಎಂದು ಯೋಚಿಸುತ್ತಿದೆ. ಭರ್ಜರಿ ಮಂತ್ರಿಯಾಗಿದ್ದಾರೆ. ಪವರ್ ಮಿನಿಸ್ಟರ್ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದರೆಂದು ಇದೇ ಸಂದರ್ಭದಲ್ಲಿ ಮಾನದಾಳದ ಮಾತುಗಳನ್ನಾಡಿದರು.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟಾ ಶ್ರೀವಾಸ ಪೂಜಾರಿ ಮಾತನಾಡಿ, ಮೈಸೂರು ದಸರಾದ ಬಳಿಕ ಅತೀ ದೊಡ್ಡ ಮೆರವಣಿಗೆ ಆಯೋಜಿಸಿರುವುದು ಕಾರ್ಕಳದ ಉತ್ಸವವಾಗಿದೆ. ಅದ್ಭುತ ಕಲ್ಪನೆಯನ್ನು ಇಟ್ಟುಕೊಂಡು ಕಾರ್ಕಳ ಉತ್ಸವ ನಡೆಯುತ್ತಿದೆ. ವೈಚಾರಿಕ ವಿಚಾರಗಳನ್ನು ಕ್ರೋಡೀಕರಿಸಿ ಒಂದು ಅಧ್ಬುತ ಸಂಘಟನೆಯ ಸ್ವರೂಪವನ್ನು ಒಬ್ಬ ಶಾಸಕನಾಗಿ, ಸಚಿವನಾಗಿ ಕ್ಷೇತ್ರದ ಅಭಿವೃದ್ಧಿ ಮುಂದಿಟ್ಟು ಸಚಿವ ಸುನೀಲ್ ಕುಮಾರ್ ಉತ್ಸವವನ್ನು ಆಯೋಜಿಸಿದ್ದಾರೆ. ಕರೋನಾ ಸಂಕಷ್ಟದ ನಡುವೆ ಅತಂತ್ರವಾಗಿದ್ದ ಬದುಕು ಕಾರ್ಕಳ ಉತ್ಸವದ ಮೂಲಕ ಪುಟಿದೇಳುವಂತೆ ಮಾಡಿದೆ. ನಾವೆಲ್ಲರೂ ಭಾರತೀಯ ನಾವೆಲ್ಲ ಕಾರ್ಕಳದವರೆಂಬ ಭಾವನೆ ವ್ಯಕ್ತವಾಗಲಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, 9 ದಿನಗಳಿಂದ ಯಶಸ್ಸು ಆಗಿ ಕಾರ್ಕಳ ಉತ್ಸವ ನಡೆದಿದೆ. ಇದಕ್ಕೆ ಸರಿಸಮಾನವಾದ ಉತ್ಸವ ಇನ್ನೊಂದಿಲ್ಲ. ಆ ಮೂಲಕ ಕನ್ನೆಡ ಮತ್ತು ಸಂಸ್ಕೃತಿ ವೈಭವೀಕರಣವಾಗಿದೆ. ಯಂತ್ರೀಕರಣ ಬದುಕಿನಲ್ಲಿ ಇರುವಾಗ ಸಾವಯವ ಗೊಬ್ಬರದ ಮೂಲಕ ಕಾರ್ಕಳ ಕಜೆ,ಬಿಳಿ ಬೆಂಡೆಯನ್ನು ಬ್ರಾಂಡ್ ಮಾಡಿದ ಕೀರ್ತಿ ಇದೇ ಕಾರ್ಕಳದ ಮಣ್ಣಿಗೆ ಸಲ್ಲುತ್ತದೆ. ನೆಲೆಬೀಡಿನಲ್ಲಿ ಮತ್ತೇ ಕಲೆ-ಸಂಸ್ಕೃತಿ ನೆಲೆಯೂರುತ್ತದೆ ಆ ಮೂಲಕ ಭಾರತೀಯ ಪರಂಪರೆಗೆ ಗೌರವ ಸಂದಾಯವಾಗುತ್ತದೆ ಎಂದರು.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಜಿ ಮುಖ್ಯಮಂತ್ರಿಯವರ ಬಗ್ಗೆ ಉಲ್ಲೇಖಿಸಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಾಮಾಜಿಕ ಹಿನ್ನಲ್ಲೆಯುಳ್ಳ, ಹಿಂದುಳಿದ ವರ್ಗದಿಂದ ಬಂದು ರಾಜ್ಯದ ಮುಖ್ಯಮಂತ್ರಿಯಾಗಿ ಹೊಸ ಕನಸ್ಸು ಬಿತ್ತಿದವರು. ರಾಜಕೀಯ ವಿಚಾರದಲ್ಲಿ ವೈಚಾರಿಕತೆ ಹಲವು ಇರಬಹುದು. ಆದರೆ ನಮ್ಮ ನಡುವೆ ಬೆಳೆದು ರಾಜಕೀಯದಲ್ಲಿ ಹೊಸಬಾಷ್ಯ ಬರೆದ ಕೀರ್ತಿ ವೀರಪ್ಪ ಮೊಯ್ಲಿಯವರಿಗೆ ಸಲ್ಲುತ್ತದೆ. ಅಂತಹ ಗಣ್ಯರನ್ನು ಗೌರವಿಸುವುದೆಂದರೆ ಸಚಿವ ಸುನೀಲ್ಕುಮಾರ್ರವರಿಗೆ ಗೌರವ ಸಲ್ಲುತ್ತದೆ. ಸನ್ಮಾನ ಸ್ವೀಕರಿಸಿದ ವೀರಪ್ಪ ಮೊಯ್ಲಿಯವರಿಗೆ ಗೌರವ ಭಾವನೆ ಹೆಚ್ಚುತ್ತದೆ. ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿಇಟಿ ಜಾರಿಗೆ ತರುವ ಮೂಲಕ ಮೆರಿಟ್ ಆಧಾರದಲ್ಲಿ ಬಡಮಕ್ಕಳಿಗೆ ಸರಕಾರಿ ಉದ್ಯೋಗ ದೊರಕಲು ಅವಕಾಶ ದೊರೆತ್ತಿದೆ. ಒಳಿತು ಮಾಡಿದಾಗ ಕೊಂಡಾಡುವ ಜಾಯಮಾನದ ಜೊತೆಗೆ ತಪ್ಪು ಮಾಡಿದಾಗ ಸಲಹೆ ನೀಡುವ ಮನೋಭಾವ ನಮ್ಮಲಿರಬೇಕೆಂದರು.
ವಕೀಲ ಎಂ.ಕೆ. ವಿಜಯಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಭಾಸ್ಕರ್, ಭಾರತ್ ಸಮೂಹ ಸಂಸ್ಥೆಯ ಮುಖ್ಯಸ್ಥ ಸುಬ್ರಾಯ ಎಂ. ಪೈ ಉಪಸ್ಥಿತರಿದ್ದರು.
ರವೀಂದ್ರ ಕುಮಾರ್ ಸ್ವಾಗತಿಸಿದರು. ಸಂಗೀತಾ ಕುಲಾಲ್ ನಿರೂಪಿಸಿದರು.