ಕಾಸರಗೋಡು, ಮಾ 19 (DaijiworldNews/HR): ದಾಖಲೆ ಪತ್ರ ನೀಡಲು ಲಂಚ ಹಾಗೂ ಮದ್ಯ ಪಡೆದ ಗ್ರಾಮಾಧಿಕಾರಿ ಹಾಗೂ ಸಿಬಂದಿ ವಿಜಿಲೆನ್ಸ್ ಬಲೆಗೆ ಬಿದ್ದ ಘಟನೆ ನೆಟ್ಟಣಿಗೆಯಲ್ಲಿ ನಡೆದಿದೆ.
ನೆಟ್ಟಣಿಗೆ ಗ್ರಾಮ ಕಚೇರಿ ಅಧಿಕಾರಿ ಎಸ್.ಎಲ್ ಸೋನಿ ಹಾಗೂ ಸಿಬಂದಿ ಶಿವಪ್ರಸಾದ್ ಬೆಳೆಗೆ ಬಿದ್ದವರು.
ಕಾಸರಗೋಡು ವಿಜಿಲೆನ್ಸ್ ಡಿವೈಎಸ್ಪಿ ಕೆ.ವಿ ವೇಣುಗೋಪಾಲ್ ನೇತೃತ್ವದ ತಂಡವು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದೆ.
ಮನೆ ನಿರ್ಮಾಣಕ್ಕಾಗಿ ಆದೂರು ನಿವಾಸಿ ರೋರ್ವರು ದಾಖಲೆ ಪತ್ರ ಪಡೆಯಲು ಗ್ರಾಮ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈಗ ಇರುವ ಕಟ್ಟಡ ಶೆಡ್ ಅನ್ನು ತೆರವು ಗೊಳಿಸಲು ಅನುಮತಿ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು.
ಇನ್ನು ಗ್ರಾಮಾಧಿಕಾರಿಯನ್ನು ಸಂಪರ್ಕಿಸಿದಾಗ 25 ದಿನ ಬಿಟ್ಟು ಬರುವಂತೆ ತಿಳಿಸಲಾಗಿತ್ತು. ಶೀಘ್ರ ದಾಖಲೆ ಪತ್ರ ಅಗತ್ಯ ಎಂದಾಗ ಎರಡು ಸಾವಿರ ರೂ. ಹಾಗೂ ಒಂದು ಮದ್ಯದ ಬಾಟಲಿ ತಲಪಿಸುವಂತೆ ಹೇಳಿದ್ದನು.
ಈ ಬಗ್ಗೆ ವಿಜಿಲೆನ್ಸ್ ಗೆ ಅರ್ಜಿದಾರರು ದೂರು ನೀಡಿದ್ದರು. ಅದರಂತೆ ವಿಜಿಲೆನ್ಸ್ ಕಾರ್ಯಾಚರಣೆ ನಡೆಸಿದ್ದು, ಶನಿವಾರ ಸಂಜೆ ಮದ್ಯ ಹಾಗೂ ಹಣವನ್ನು ಪಡೆಯುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ವಿಜಿಲೆನ್ಸ್ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದೆ.