ಬಂಟ್ವಾಳ, ಮಾ 19 (DaijiworldNews/HR): ಕರಾವಳಿಯ ಸಾಮರಸ್ಯವನ್ನು ಗೋಡ್ಸೆ ವಂಶಸ್ಥರು ಹಾಳು ಮಾಡುತ್ತಿದ್ದಾರೆ. ಗೋಡ್ಸೆ ಒಬ್ಬ ಮತಾಂಧನಾಗಿದ್ದು, ಆರೆಸ್ಸೆಸ್, ಭಜರಂಗದಳ, ಶ್ರೀರಾಮ ಸೇನೆ ಮತ್ತು ಸಂಘಪರಿವಾರದವರೆಲ್ಲಾ ಗೋಡ್ಸೆ ಮತ್ತು ಸಾರ್ವಕರ್ ಅನುಯಾಯಿಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ನ ಯುವ ಕಾಂಗ್ರೇಸ್ ವತಿಯಿಂದ ನಡೆದ ಯುವಕರ ನಡೆ ಸಾಮರಸ್ಯದ ಕಡೆ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ದೇಶದ ಸ್ವಾತಂತ್ರ್ಯಕ್ಕಾಗಿ ಆರೆಸ್ಸೆಸ್ ನಾಯಕರು ಹೋರಾಡಿದ ಸಾಕ್ಷಿಗಳು ಇವೆಯಾ? ಇವರಿಂದ ದೇಶ ಭಕ್ತಿ ಪಾಠ ಕಲಿಯಬೇಕಾ ?ಎಂದು ಪ್ರಶ್ನಿಸಿದರು.
ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಹಿಂದೂ ಸಂಘಟನೆಯ ಯುವಕನ ಕೊಲೆಗೆ ರಾಜಕೀಯ ಬಣ್ಣ ಕಟ್ಟಿ ಅದರಿಂದ ಲಾಭ ಪಡೆಯಲು ಮುಂದಾಗುತ್ತಾರೆ. ಈಶ್ವರಪ್ಪ ಎಂಬ ಪೆದ್ದ, ಮತಾಂಧ, 144 ಸೆಕ್ಷನ್ ಇದ್ದರೂ ಶವ ಮೆರವಣಿಗೆ ಮಾಡಿದ್ದಾರೆ, ಜೊತೆಗೆ ಸರಕಾರದಿಂದ ಲಕ್ಷಾಂತರ ರೂ ಪರಿಹಾರವನ್ನು ನೀಡುವಂತೆ ಮಾಡಿದ ಅವರು ಬೆಳ್ತಂಗಡಿ ಯಲ್ಲಿ ನಡೆದ ದಿನೇಶ್ ಕೊಲೆಗೆ ಯಾಕೆ ಪರಿಹಾರ ನೀಡಲು ಒತ್ತಾಯಿಸಿಲ್ಲ, ಅದು ನಾನು ಮಾಡಿದ ಒತ್ತಾಯದಿಂದ ಸರಕಾರ ಅಲ್ಪಸ್ವಲ್ಪ ಪರಿಹಾರ ನೀಡಿದೆ ಎಂದು ಅವರು ಹೇಳಿದರು.
ಬಿಜೆಪಿಯಿಂದ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದ ಅವರು, ಸಂವಿಧಾನ ಇಲ್ಲದಿದ್ದರೆ ನೀವು ಪ್ರಧಾನ ಮಂತ್ರಿಯಾಗುತ್ತಿದ್ದೀರಾ ? ಎಂದು ಪ್ರಧಾನಿ ಮೋದಿಗೆ ಪ್ರಶ್ನಿಸಿದರು. ಸಂವಿಧಾನ ಬದಲಾಯಿಸುತ್ತೇನೆ ಎಂದು ಸಂವಿಧಾನಕ್ಕೆ ಅಪಚಾರ ಮಾಡಿದ ಅನಂತ್ ಕುಮಾರ್ ಹೆಗ್ಡೆ ಯವರನ್ನು ಸಂಸದ ಸ್ಥಾನ ದಿಂದ ಯಾಕೆ ಕೆಳಗಿಳಿಸಿಲ್ಲ ಎಂದು ಪ್ರಶ್ನಿಸಿದರು.
ಯುವ ಸಮುದಾಯ ಬಿಜೆಪಿಯನ್ನು ಕಿತ್ತುಎಸೆಯುತ್ತೇವೆ ಎಂಬ ಸಂಕಲ್ಪವನ್ನು ಮಾಡಿದರೆ ಮಾತ್ರ ದೇಶ ರಾಜ್ಯ ಉಳಿಯುತ್ತೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಬಡವರಿಗೆ ಒಂದೇ ಒಂದು ಮನೆ ನೀಡಲು ಸಾಧ್ಯವಾಗದ ಬಿಜೆಪಿ ಇರಬೇಕಾ? ಸಮಾಜ ಸಾಮರಸ್ಯದಿಂದ ಬದುಕಬೇಕಾದರೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು.
ಎಲ್ಲಾ ಧರ್ಮದ ಅಧಾರದ ಮೇಲೆ ದೇಶ ನಿಂತಿದೆ. ನರೇಂದ್ರ ಮೋದಿಯವರು ಓರ್ವ ಸುಳ್ಳುಗಾರ ಪ್ರಧಾನ ಮಂತ್ರಿ. ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ, ಉದ್ಯೋಗದ ಬಗ್ಗೆ ಮಾತನಾಡದೆ ಕಾಶ್ಮೀರಿ ಫೈಲ್ಸ್ ನಿಂದ ಹಿಡಿದು ಕೇವಲ ಎಮೋಶನಲ್ ಸಂಗತಿ ಬಗ್ಗೆ ಮಾತ್ರ ಮಾತನಾಡುತ್ತಾರೆ. ಯುವಕರು ದೇಶದ ಭವಿಷ್ಯವನ್ನು ರೂಪಿಸುವರು, ದೇಶವನ್ನು ಕಟ್ಟುವರು, ಅವರು ಜಾತ್ಯತೀತ ಎಂಬ ತತ್ವದಡಿಯಲ್ಲಿ ಸಂಘಟಿತರಾಗಬೇಕಾಗಿದೆ , ಅ ಕೆಲಸ ವನ್ನು ಪಾಣೆಮಂಗಳೂರು ಯುವ ಕಾಂಗ್ರೇಸ್ ಅಧ್ಯಕ್ಷ ನವಾಜ್ ಮಾಡಿದ್ದಾರೆ ಎಂದು ಅವರು ಹೇಳಿದರು.
ಕರಾವಳಿ ಜಿಲ್ಲೆಗಳಲ್ಲಿ ಸಮಾಜದ ಸ್ವಾಸ್ಥ್ಯ ಹಾಳಾಗಿದ್ದು, ಸಮಾಜದಲ್ಲಿ ಸಾಮರಸ್ಯ ವನ್ನು ಉಳಿಸಬೇಕಾಗಿದೆ, ಶಾಂತಿ, ನೆಮ್ಮದಿ ಇದ್ದರೆ ಮಾತ್ರ ದೇಶ ಅಭಿವೃದ್ಧಿ ಯಾಗಲು ಸಾಧ್ಯ ಅಗುತ್ತದೆ. ಪರಸ್ಪರ ಪ್ರೀತಿ ವಿಶ್ವಾಸ ದಿಂದ ಒಂದೇ ತಾಯಿ ಮಕ್ಕಳಂತೆ ಜೀವನ ಮಾಡಬೇಕಾಗಿದೆ. ಜಾತಿ ವ್ಯವಸ್ಥೆ ಯಷ್ಟು ಅಮಾನವೀಯ ಸ್ಥಿತಿ ಇನ್ನೊಂದಿಲ್ಲ ಎಂದು ಅವರು ಹೇಳಿದರು. ಮನುಸ್ಮೃತಿಯ ಫಲವಾಗಿ ಸಮಾಜದಲ್ಲಿ ಜಾತಿ ಅಂಟಿಕೊಂಡು ಬಂದಿದೆ. ಪಟ್ಟಭದ್ರ ಹಿತಾಸಕ್ತಿಯ ವ್ಯಕ್ತಿಗಳು ಜಾತಿ ವ್ಯವಸ್ಥೆ ಹುಟ್ಟುಹಾಕಿದರು. ಜಾತಿ ಧರ್ಮಕ್ಕಾಗಿ ಹೊಡೆದಾಟ ಮಾಡುವುದನ್ನು ನಿಲ್ಲಿಸಿ ಈ ದೇಶದ ಅಭಿವೃದ್ಧಿಗಾಗಿ ಒಂದಾಗಿ ಎಂದು ಅವರು ಕರೆ ನೀಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿ , ಕಾಂಗ್ರೇಸ್ ಪಕ್ಷ ಸಮಾಜದ ಎಲ್ಲಾ ವರ್ಗದವರನ್ನು ಪ್ರೀತಿ ಮಾಡಿದ ಏಕೈಕ ಪಕ್ಷವಾಗಿದ್ದು, ದೇಶದ ಜಾತ್ಯಾತೀತ ಚಳುವಳಿ ಯನ್ನು ಬಲಿಷ್ಠ ಗೊಳಿಸಬೇಕು. ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕಾಗಿದೆ.
ಭೂಮಸೂದೆ ಕಾನೂನಿನಡಿಯಲ್ಲಿ ಅತ್ಯಂತ ಹೆಚ್ಚು ಭೂಮಿ ಪಡೆದ ಜನ ಇದ್ದರೆ ಅದು ದ.ಕ.ಜಿಲ್ಲೆಯವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯೋಜನೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ 94 ಸಿ. ಹಕ್ಕು ಪತ್ರ ಪಡೆದವರು ಬಂಟ್ವಾಳದ ಜನತೆ ಅವರ ಸಹಕಾರವನ್ನು ಮರೆಯಬಾರದು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಪಿ.ಎ.ರಹೀಂ, ಮಹಮ್ಮದ್ ಶಫಿ ಬಿ.ಮೋಹನ್ ಅವರು ಕಾಂಗ್ರೇಸ್ ಸೇರ್ಪಡೆಯಾದರು.ಮುಖ್ಯ ಭಾಷಣಗೈದ ಸುಧೀರ್ ಮರೋಳಿಯವರು, ಶಂಕರಾಚಾರ್ಯರು, ಕನಕದಾಸರದು ನಿಜವಾದ ಜಾತ್ಯಾತೀತ ಸಿದ್ದಾಂತ ಎಂದ ಅವರು, ಕಾಂಗ್ರೇಸ್ ಪಕ್ಷ ಇದೇ ಹಾದಿಯಲ್ಲಿ ಮುನ್ನಡೆಯುತ್ತಾ, ಸಮಾಜವನ್ನು ಮುನ್ನಡೆಸುತ್ತಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿಮಂತ್ರಿ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಂಜುನಾಥ ಭಂಡಾರಿ, ಹಿರಿಯ ಕಾಂಗ್ರೇಸ್ ಮುಖಂಡ ಬಿ.ಎಚ್. ಖಾದರ್, ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್, ಮಾಜಿ ಯುವಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ, ಮಾಜಿ ಶಾಸಕ ಮೊಯ್ದೀನ್ ಬಾವ, ಬಂಟ್ವಾಳ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಪ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬೆರಿಲ್ ರೇಗೋ, ಉಪಾಧ್ಯಕ್ಷ ಗಿರೀಶ್ ಆಳ್ವ, ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಎ. ಬಾವ, ಪ್ರಮುಖ ರಾದ ಶಾಲೆಟ್ ಪಿಂಟೋ, ಕೃಪಾ ಅಮರ್ ಆಳ್ವ, ಮಮತಾ ಗಟ್ಟಿ, ಶಾಹುಲ್ ಹಮೀದ್, ಪಿಯೂಸ್ ಎಲ್ ರೋಡ್ರಿಗಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಸುದೀಪ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ ಜೈನ್, ಮಾಜಿ ಜಿಲ್ಲಾ ಪಂಚಾಯತ್ ಎಂ. ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯ ಶಶಿಧರ ಹೆಗ್ಡೆ , ಬಂಟ್ವಾಳ ಬ್ಲಾಕ್ ಯುವ ಕಾಂಗ್ರೇಸ್ ಅಧ್ಯಕ್ಷ ಸುರೇಶ್ ಜೋರಾ ಉಪಸ್ಥಿತರಿದ್ದರು.