ಬೆಳ್ತಂಗಡಿ, ಮಾ 19 (DaijiworldNews/HR): ಇತ್ತೀಚೆಗೆ ಕೊಲೆಯಾದ ಬೆಳ್ತಂಗಡಿಯ ದಿನೇಶ್ ಕನ್ಯಾಡಿ ಅವರ ಮನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರವಾಗಿ ಒಂದು ಲಕ್ಷ ರೂ.ಗಳನ್ನು ಮೃತನ ಕುಟುಂಬದವರಿಗೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಭಜರಂಗದಳ ಕಾರ್ಯಕರ್ತನಿಂದ ಇತ್ತೀಚೆಗೆ ಕೊಲೆಯಾದ ಬೆಳ್ತಂಗಡಿಯ ಯುವಕ, ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ದಿನೇಶ್ ಕನ್ಯಾಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದೆ ಎಂದರು.
ಇನ್ನು ಕೊಲೆಗೀಡಾದ ಕಾಂಗ್ರೆಸ್ ಕಾರ್ಯಕರ್ತ, ದಲಿತ ಯುವಕ ದಿನೇಶ್ ಕನ್ಯಾಡಿ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ರೂ. 25 ಲಕ್ಷ ಪರಿಹಾರ ನೀಡಬೇಕು, ಈ ವಿಚಾರವನ್ನು ಸದನದಲ್ಲಿ ಕೂಡ ಪ್ರಸ್ತಾಪ ಮಾಡುತ್ತೇನೆ. ದಿನೇಶ್ ಕುಟುಂಬದವರಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.
ಈ ವೇಳೆ ಮಾಜಿ ಶಾಸಕ ವಸಂತ ಬಂಗೇರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹಾಜರಿದ್ದರು.