ವಾಷಿಂಗ್ಟನ್, ಡಿ21(SS): ಕ್ರಿಸ್ಮಸ್ ಹಬ್ಬವನ್ನು ಸ್ವಾಗತಿಸಲು ಎಲ್ಲರೂ ಕಾಯುತ್ತಿರುವಾಗಲೇ ಇತ್ತ ವಾಷಿಂಗ್ಟನ್ ಮಕ್ಕಳ ರಾಷ್ಟ್ರೀಯ ಆಸ್ಪತ್ರೆಗೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸಂತ ಕ್ಲಾಸ್ ಕ್ಯಾಪ್ ತೊಟ್ಟು ಭೇಟಿ ನೀಡಿ ಮಕ್ಕಳಿಗೆ ಉಡುಗೊರೆ ಹಂಚಿ ಸಂಭ್ರಮಿಸಿದ್ದಾರೆ.
ಬರಾಕ್ ಒಬಾಮ ಸಂತ ಕ್ಲಾಸ್ ಕ್ಯಾಪ್ ವೇಷ ಹಾಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳಿಗೆ, ವೈದ್ಯರಿಗೆ, ಸಿಬ್ಬಂದಿಗೆ ಒಬಾಮ ಕ್ರಿಸ್ಮಸ್ ಹಬ್ಬದ ಶುಭ ಕೋರಿದ್ದಾರೆ. ಜೊತೆಗೆ ಹೊಸ ವರ್ಷದ ಶುಭಾಶಯವನ್ನು ತಿಳಿಸಿದ್ದಾರೆ. ಮಕ್ಕಳಿದ್ದ ವಾರ್ಡ್ ಗಳಿಗೆ ತೆರಳಿದ ಒಬಾಮ ಮಕ್ಕಳನ್ನು ಅಪ್ಪಿಕೊಂಡು ಆರೋಗ್ಯ ವಿಚಾರಿಸಿದ್ದಾರೆ. ಅಮೂಲ್ಯ ಉಡುಗೊರೆಗಳನ್ನು ನೀಡಿದ್ದಾರೆ.
ನಮ್ಮ ಜನರಿಗೆ ನಾವು ಶರಣಾಗುವುದು ಹಬ್ಬದ ವಿಶೇಷತೆ ಎಂದು ಹೇಳಿದ ಅವರು, ಕಷ್ಟದ ಸಂದರ್ಭದಲ್ಲಿ ರಾಷ್ಟ್ರಕ್ಕೆ ನರ್ಸ್ ಗಳು ಮತ್ತು ವೈದ್ಯರ ಅಗತ್ಯತೆ ತುಂಬಾ ಇದೆ. ವೈದ್ಯರು ಮತ್ತು ನರ್ಸ್ ಗಳು ನಮ್ಮನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಎಂದು ಒಬಾಮ ಶ್ಲಾಘಿಸಿದ್ದಾರೆ.
ಕುಟುಂಬ ಎಲ್ಲೇ ಇರಲಿ, ನೀವು ಪ್ರೀತಿಸುವವರು ಎಲ್ಲೇ ಇರಲಿ, ಅಲ್ಲೆಲ್ಲ ಕ್ರಿಸ್ಮಸ್ ಇರಲಿದೆ ಎಂದು ಒಬಾಮ ಚಿಕಿತ್ಸೆಗಾಗಿ ಬಂಧುಗಳಿಂದ ದೂರವಿದ್ದ ಬಾಲಕಿಗೆ ಧೈರ್ಯ ತುಂಬಿದ್ದಾರೆ. ನಂತರ ಬಾಲಕಿಗೆ ಒಬಾಮ ಮೇಕಪ್ ಕಿಟ್ ಮತ್ತು ನೈಲ್ ಪಾಲಿಶ್ ಅನ್ನು ನೀಡಿ ಮಕ್ಕಳ ಹರ್ಷಕ್ಕೆ ಕಾರಣವಾಗಿದ್ದಾರೆ.