ಮಂಗಳೂರು, ಮಾ 19 (DaijiworldNews/DB): ಕರ್ನಾಟಕ ನಾಟಕ ಅಕಾಡೆಮಿಯ ಜಿಲ್ಲಾ ಅಮೃತ ರಂಗ ಮಹೋತ್ಸವದ ಅಂಗವಾಗಿ ಎರಡು ದಿನಗಳ ನಾಟಕೋತ್ಸವ ಮತ್ತು ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ರಂಗಭಾಸ್ಕರ-2022 ಪ್ರಶಸ್ತಿ ಪ್ರದಾನ ಸಮಾರಂಭ ಮಾ. 22 ಮತ್ತು 23ರಂದು ಸಂಜೆ 6ಕ್ಕೆ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಬಹುಮುಖ ಪ್ರತಿಭೆ, ರಂಗಸಂಗಾತಿ ಸ್ಥಾಪಕ ಸದಸ್ಯ ದಿ. ಭಾಸ್ಕರ ನೆಲ್ಲಿತೀರ್ಥ ನೆನಪಿನಲ್ಲಿ ನೀಡಲಾಗುವ ರಂಗ ಭಾಸ್ಕರ ಪ್ರಶಸ್ತಿಗೆ ನಟ, ನಿರ್ದೇಶಕ, ನಾಟಕಕಾರ ಕೆ. ರಾಧಾಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಉಡುಪಿ ಮತ್ತು ದ.ಕ. ಜಿಲ್ಲಾ ಸದಸ್ಯ ಸಂಚಾಲಕ ಎಂ.ಕೆ. ಮಠ ಉಪ್ಪಿನಂಗಡಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಕಟೀಲು ಶ್ರೀ ಹರಿನಾರಾಯಣ ಅಸ್ರಣ್ಣ ಆಶೀರ್ವಚನ ನೀಡಲಿದ್ದು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಉದ್ಘಾಟಿಸಲಿದ್ದಾರೆ. ಬಳಿಕ ಸುವರ್ಣ ಪ್ರತಿಷ್ಠಾನ ಮಂಗಳೂರು ಅಭಿನಯದ ’ಕೋರ್ಟ್ ಮಾರ್ಷಲ್’ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
23ರಂದು ಸಂಜೆ 6ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಹಾಗೂ ಕಲಾಪೋಷಕ ಪಿ. ಮನೋಹರ್ ಉದ್ಘಾಟಿಸಲಿದ್ದಾರೆ. ಅಂದು ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಅಭಿನಯದ ’ದಾಟ್ಸ್ ಆಲ್ ಯುವರ್ ಆನರ್’ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ವಿವರಿಸಿದರು.
ರಂಗ ಸಂಗಾತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ವಿಶ್ವಸ್ಥ ಮಂಡಳಿ ಸದಸ್ಯ ಮೈಮ್ ರಾಮದಾಸ್ ಉಪಸ್ಥಿತರಿದ್ದರು.