ಉಡುಪಿ, ಡಿ 21(SM): ಹಿಂದುಗಳ ಹಲವು ವರ್ಷಗಳ ಕನಸು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ, ಸಂಸತ್ತಿನಲ್ಲಿ ಶಾಸನ ತರಲು ಆಗ್ರಹಿಸಿ ವಿವಿದೆಡೆ ಆಯೋಜಿಸಿದ ಜನಾಗ್ರಹ ಸಭೆಗಳು ಯಶಸ್ವಿ ಕಂಡಿವೆ. ಮುಂದೆ, ಈ ಕಾರ್ಯ ನಿರ್ವಿಘ್ನ ವಾಗಿ ಸಾಗಲು ಸಂಕಲ್ಪಿಸಿ ಡಿಸೆಂಬರ್ 18 ರಿಂದ ಗೀತಾಜಯಂತಿಯಿಂದ ಒಂಭತ್ತು ದಿನಗಳ ಕಾಲ ಧಾರ್ಮಿಕ ಅನುಷ್ಠಾನವನ್ನು ದೇಶಾದ್ಯಂತ ನಡೆಸುವಂತೆ ಸಾಧು ಸಂತರು ಕರೆ ನೀಡಿದ್ದಾರೆ ಎಂದು ವಿಶ್ವ ಹಿಂದು ಪರಿಷದ್ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಮಂಗಳೂರು ವಿಭಾಗದ ಎಲ್ಲಾ ಗ್ರಾಮ ತಾಲ್ಲೂಕು ಜಿಲ್ಲೆಗಳಲ್ಲಿ ಧಾರ್ಮಿಕ ಅನುಷ್ಠಾನ ಸಂಕಲ್ಪ ಅಭಿಯಾನ ವನ್ನು ವಿಶ್ವ ಹಿಂದು ಪರಿಷತ್ ನಾಡಿನ ಎಲ್ಲ ರಾಮ ಭಕ್ತರು ಈ ಕೈಂಕರ್ಯದಲ್ಲಿ ಭಾಗವಹಿಸಲಿದ್ದಾರೆ. ಈ ಒಂಭತ್ತು ದಿನಗಳ ಕಾಲ ಎಲ್ಲಾ ಹಿಂದುಗಳು ವೈಯಕ್ತಿಕವಾಗಿ " ಶ್ರೀ ರಾಮ ಜಯ ರಾಮ ಜಯ ಜಯ ರಾಮ" ರಾಮ ತಾರಕ ಮಂತ್ರವನ್ನು ೧೦೮ ಬಾರಿ ಪಠಿಸಬೇಕು ಎಂದು ಸಾಧು ಸಂತರು ಕರೆ ನೀಡಿದ್ದಾರೆ.
ಪ್ರತಿ ನಗರ ಬಡಾವಣೆ ಗಳ ದೇವಸ್ಥಾನ, ಭಜನಾ ಮಂದಿರ ಮತ್ತು ಇತರ ಹಿಂದು ದೇವಾಲಯಗಳಲ್ಲಿ ಒಟ್ಟಾಗಿ ಒಂದು ಗಂಟೆ ಕಾಲ ಸಾಮೂಹಿಕ ಭಜನೆ, ಜಪ, ಹನುಮಾನ್ ಚಾಲೀಸ್, ಗೀತಾ ಪಾರಾಯಣ, ಲಲಿತ ಸಹಸ್ರ ನಾಮ, ವಿಷ್ಣು ಸಹಸ್ರನಾಮ ಇತ್ಯಾದಿ ಮಾಡಬೇಕು ಹಾಗೂ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ದೊಡ್ದ ಮಟ್ಟದ ಸಾಮೂಹಿಕ ಹೋಮ, ಹವನ, ಅಭಿಷೇಕ ಹಾಗೂ ಮಂತ್ರ ಪಠಣ ಮಾಡಬೇಕೆಂತಲೂ ಅವರು ಕರೆ ನೀಡಿದ್ದಾರೆ ಎಂದು ಶರಣ್ ಪಂಪ್ ತಿಳಿಸಿದರು.