ಮಂಗಳೂರು ಡಿ21(SS): 2018ರ ಕರಾವಳಿ ಉತ್ಸವಕ್ಕೆ ಇಂದು ವೈಭವದ ಚಾಲನೆ ದೊರಕಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕರಾವಳಿ ಉತ್ಸವದ ಎಲ್ಲಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ನೆಹರೂ ಮೈದಾನದಿಂದ ಉತ್ಸವದ ಅಂಗವಾಗಿ ಕಲಾ ತಂಡಗಳನ್ನೊಳಗೊಂಡ ಆಕರ್ಷಕ ಮೆರವಣಿಗೆ ಹೊರಡಲಿದ್ದು, ಲಾಲ್ ಬಾಗ್ ಕರಾವಳಿ ಉತ್ಸವ ಮೈದಾನದವರೆಗೆ ಸಂಚರಿಸಲಿದೆ. ನಂತರ ವಸ್ತುಪ್ರದರ್ಶನ ಉದ್ಘಾಟನೆಯಾಗಲಿದೆ.
ಕರಾವಳಿ ಉತ್ಸವದ ಅಂಗವಾಗಿ ಮಂಗಳೂರು ನಗರದ ವಿವಿಧ ಕಡೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕೊಂಚಾಡಿಯಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಕಾರ್ಯಕ್ರಮ ಇಂದು ನಡೆಯಲಿದೆ. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಲಾಲ್ ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿ ವಸ್ತುಪ್ರದರ್ಶನ ಆಯೋಜಿಸಲಾಗಿದ್ದು, ಡಿಸೆಂಬರ್ 21ರಿಂದ 45 ದಿನಗಳ ಕಾಲ ನಡೆಯುವ ಈ ವಸ್ತುಪ್ರದರ್ಶನದಲ್ಲಿ ವೈವಿಧ್ಯಮಯ ಮನೋರಂಜನಾ ಚಟುವಟಿಕೆಗಳು, ಅಮ್ಯೂಸ್ ಮೆಂಟ್ ಗಳು, ಮಾರಾಟ ಮೇಳ, ಮಕ್ಕಳ ಮನರಂಜನಾ ತಾಣಗಳು ಜನರ ಮನಸೂರೆಗೊಳಿಸಲಿದೆ.
ಕರಾವಳಿ ಉತ್ಸವದ ಪ್ರಮುಖ ಭಾಗವಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಕದ್ರಿ ಪಾರ್ಕ್ ಹಾಗೂ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿವೆ.