ಬೆಂಗಳೂರು,ಡಿ 20(MSP): ಕ್ರಿಸ್ಮಸ್ ಹಬ್ಬದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್'ಟಿಸಿ) ಪ್ರಯಾಣಿಕರ ಅನುಕೂಲಕ್ಕಾಗಿ ಡಿ.21 ಮತ್ತು 22 ರಂದು ಬೆಂಗಳೂರು ನಗರದಿಂದ ರಾಜ್ಯ ಮತ್ತು ಹೊರರಾಜ್ಯಗಳ ವಿವಿಧೆಡೆಗೆ 550 ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದೆ.
ಕ್ರಿಸ್ಮಸ್ ಹಬ್ಬ ಹಾಗೂ ಶಾಲಾ ಕಾಲೇಜುಗಳಿಗೆ ಕ್ರಿಸ್ ಮಸ್ ರಜೆಯ ಹಿನ್ನಲೆಯಲ್ಲಿ ಪ್ರಯಾಣಿಕರು ತಮ್ಮೂರಿಗೆ ಹಾಗೂ ಪ್ರವಾಸಗಳಿಗೆ ಹೋಗುವ ಹಿನ್ನಲೆಯಲ್ಲಿ ಹೆಚ್ಚುವರಿ ಬಸ್ ನ ಅನುಕೂಲ ಕಲ್ಪಿಸಲಾಗಿದೆ. ರಾಜ್ಯದೊಳಗಡೆ ಸಂಚರಿಸುವ ಬಸ್ ಗಳು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಸ್ಯಾಟ್'ಲೈಟ್ ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್ ಗಳು ಹೊರಡಲಿವೆ.
ಇನ್ನು ಹೊರ ರಾಜ್ಯದ ಸ್ಥಳಕ್ಕೆ ಶಾಂತಿನಗರದ ಕೆಎಸ್ಆರ್'ಟಿಸಿ ಕೇಂದ್ರ ಘಟಕ 2 ಮತ್ತು 4 ರಿಂದ ಮಧುರೈ, ಕುಂಭಕೋಣಂ. ತಿರುಚಿ, ಚೆನ್ನೈ, ಕೊಯಮತ್ತೂರು, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದೆಡೆ ಬಸ್ ಸಂಚಾರ ಕಲ್ಪಿಸಲಾಗಿದೆ.
ಇದಲ್ಲದೆ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ, ಜಯನಗರ 4ನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್, ಮಲ್ಲೇಶ್ವರಂ 18ನೇ ಅಡ್ಡ ರಸ್ತೆ, ಬನಶಂಕರಿ, ಜೀವನ್ ಭೀಮಾನಗರ, ಐಟಿಐ ಗೇಟ್, ಗಂಗಾನಗರ, ಕೆಂಗೇರಿ ಉಪನಗರ ಮೊದಲಾದ ಸ್ಥಳಗಳಿಂದಲೂ ಪ್ರಯಾಣಿಕರ ಅನುಕೂಲಕ್ಕಾಗಿ ಶಿವಮೊಗ್ಗ, ದಾವಣಗೆರೆ, ತಿರುಪತಿ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮುಂತಾದ ಮಾರ್ಗಗಳಿಗೆ ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಲಾಗುವುದು.