ಮಂಗಳೂರು, ಮಾ 16 (DaijiworldNews/DB): ಮಂಗಳೂರು ನಗರ ಸಹಿತ ದ.ಕ. ಜಿಲ್ಲೆಯಲ್ಲಿ ಮಹಿಳೆಯರನ್ನು ವ್ಯವಸ್ಥಿತವಾಗಿ ಅಕ್ರಮ ಜಾಲಕ್ಕೆ ಬೀಳಿಸಲಾಗುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ18 ವರ್ಷ ಮೇಲ್ಪಟ್ಟ 13 ಮಂದಿ ಮಹಿಳೆಯರು ಮಂಗಳೂರು ನಾಪತ್ತೆಯಾಗಿರುವುದು ಈ ಅನುಮಾನ ಹೆಚ್ಚಲು ಕಾರಣವಾಗಿದೆ.
ನಾಪತ್ತೆಯಾದ 13 ಮಂದಿಯ ಪೈಕಿ ನಾಲ್ವರು ಈಗಾಗಲೇ ಪತ್ತೆಯಾಗಿದ್ದಾರೆ. ಆದರೆ ಉಳಿದ 9 ಮಂದಿ ಇನ್ನೂ ಪತ್ತೆಯಾಗಿಲ್ಲ.
ಇದಲ್ಲದೆ 2020ರಲ್ಲಿ 18 ವರ್ಷ ಮೇಲ್ಪಟ್ಟ 75 ಮಂದಿ ನಾಪತ್ತೆಯಾಗಿ 74 ಮಂದಿ ಪತ್ತೆಯಾಗಿದ್ದರು. 2021 84 ಮಂದಿ ನಾಪತ್ತೆಯಾಗಿ 75 ಮಂದಿ ಪತ್ತೆಯಾಗಿದ್ದರು. 9 ಮಂದಿಯ ಸುಳಿವು ಇನ್ನೂ ಸಿಕ್ಕಿಲ್ಲ.
ಕೌಟುಂಬಿಕ ಕಲಹ, ಪ್ರೀತಿಗಾಗಿ ಪರಾರಿಯಾಗುವುದು, ವಿವಾಹೇತರ ಸಂಬಂಧ, ವೇಶ್ಯಾವಾಟಿಕೆಯಂತಹ ಜಾಲಕ್ಕೆ ದೂಡುವ ಉದ್ದೇಶ ಮುಂತಾದ ಕಾರಣಗಳಿಂದಾಗಿ ಮಹಿಳೆಯರ ನಾಪತ್ತೆ ಪ್ರಕರಣ ಹೆಚ್ಚುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ವ್ಯವಸ್ಥಿತವಾಗಿ ಇದು ನಡೆಯುತ್ತಿದೆ ಎಂಬುದನ್ನು ಪೊಲೀಸರು ಅಲ್ಲಗಳೆದಿದ್ದಾರೆ.
ಆಪ್ತ ಸಮಾಲೋಚಕರು ಹೇಳುವ ಪ್ರಕಾರ, ಮಹಿಳೆಯರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಮಾಡದೆ ತತ್ ಕ್ಷಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಕೆಲವರು ಮರ್ಯಾದೆಗೆ ಅಂಜಿ ದೂರು ನೀಡುವುದಕ್ಕೂ ಹಿಂದೇಟು ಹಾಕುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ದೂರು ಸ್ವೀಕರಿಸಲು ಪೊಲೀಸರೂ ವಿಳಂಬ ಮಾಡುತ್ತಾರೆ ಎಂಬ ಆರೋಪಗಳಿವೆ. ಆದರೆ ಇತರ ಅಪರಾಧ ಪ್ರಕರಣಗಳಂತೆ ಮಹಿಳೆಯರ ನಾಪತ್ತೆ ಪ್ರಕರಣಗಳನ್ನು ಕೂಡಾ ಬೇಧಿಸುವುದು ಅವಶ್ಯವಿದೆ ಎನ್ನುತ್ತಾರೆ.