ಬಂಟ್ವಾಳ, ಮಾ. 14 (DaijiworldNews/SM): ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿಲಾಗಿದೆ.
ಅರಳ ಗ್ರಾಮದ ಶುಂಠಿಹಿತ್ಲು ನಿವಾಸಿ ಆಶ್ರಫ್(42) ಬಂಧಿತ ಆರೋಪಿ. ಖಚಿತ ಮಾಹಿತಿ ಆಧಾರದ ಮೇಲೆ ಆರೋಪಿಯನ್ನು ಸೋರ್ನಾಡು ಎಂಬಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜನವರಿ 31ರಂದು ಅರಳ ಗ್ರಾಮದ ಪೋರ್ಕಳ ನಿವಾಸಿ ಅಬ್ದುಲ್ ರಹಮಾನ್ ಎಂಬವರ ಮನೆಯಿಂದ ಹಗಲು ಹೊತ್ತಿನಲ್ಲಿ ಕಳವು ನಡೆದಿತ್ತು.
ಮನೆಯವರು ಬೀಗ ಹಾಕಿ ಸಂಬಂಧಿಕರ ಮನೆಗೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ದಿನ ಮನೆಯೊಳಗೆ ನುಗ್ಗಿ ಕೋಣೆಯಲ್ಲಿದ್ದ ಗೊದ್ರೇಜಿನಿಂದ ಬೀಗ ಮುರಿದು 2 ಲಕ್ಷ ರೂಪಾಯಿ ಮೌಲ್ಯದ 5.50 ಪವನ್ ನೆಕ್ಲೆಸ್ ಸರವನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಸ್ತುತ ಈ ಪ್ರಕರಣದ ಕಾರ್ಯಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಸೋರ್ನಾಡು ಎಂಬಲ್ಲಿ ಬಂಧಿಸಿದ್ದಾರೆ. ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ, ಬಂಟ್ವಾಳ ಡಿ.ವೈಎಸ್.ಪಿ. ಪ್ರತಾಪ್ ಸಿಂಗ್ ಥೋರಾಟ್ ಅವರ ಮಾರ್ಗದರ್ಶನದಲ್ಲಿ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಅವರ ನೇತೃತ್ವದ ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ಅಪರಾಧ ವಿಭಾಗದ ಎಸ್.ಐ. ಸಂಜೀವ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.
ಎ.ಎಸ್.ಐ.ಗಳಾದ ಗಿರೀಶ್, ಬಾಲಕೃಷ್ಣ ಸಿಬ್ಬಂದಿ ಗಳಾದ ಬಸವರಾಜ್, ರಾಧಾಕೃಷ್ಣ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.