ಮಂಗಳೂರು, ಡಿ 19(SM): ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ವಿರುದ್ಧ ಜೆಡಿಎಸ್ ಉಳ್ಳಾಲ ನಗರಸಭೆ ಸದಸ್ಯರು ತಿರುಗಿಬಿದ್ದಿದ್ದು, ಸಚಿವರ ಮೇಲೆ ಆರೋಪ ನಡೆಸಿದ್ದಾರೆ. ಉಳ್ಳಾಲ ನಗರ ಸಭೆಯ ನಗರೋತ್ಥಾನ ಕಾಮಗಾರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ, ಉಳ್ಳಾಲ ಕ್ಷೇತ್ರ ಶಾಸಕ ಯು ಟಿ ಖಾದರ್ ೫ನೇ ವಾರ್ಡಿಗೆ ನಿರ್ಣಯಗೊಂಡು ಗುತ್ತಿಗೆದಾರರಿಗೆ ನೀಡಿರುವ ಕಾಮಗಾರಿಯನ್ನು ಬೇರೆ ವಾರ್ಡ್ ಗೆ ವರ್ಗಾಯಿಸಿದ್ದಾರೆ ಎನ್ನುವುದು ಸಚಿವರ ಮೇಲಿರುವ ಆರೋಪ.
ಇತ್ತೀಚೆಗೆ ನಡೆದ ಉಳ್ಳಾಲ ನಗರಸಭೆಯ ಸಭೆಯಲ್ಲಿ ಜೆಡಿಎಸ್ ವಾರ್ಡ್ ಗೆ ಮಂಜೂರಾಗಿದ್ದ ಕಾಮಗಾರಿಯನ್ನು ಸಚಿವ ಖಾದರ್, ಕಾಂಗ್ರೆಸ್ ವಾರ್ಡಿಗೆ ಬದಲಾವಣೆ ಮಾಡಿದ್ದಾರೆ. ಆ ಮೂಲಕ ಜನತಾದಳ ಸದಸ್ಯರಿಗೆ ಅನ್ಯಾಯ ಎಸಗಿದ್ದಾರೆ ಎಂದು ಉಳ್ಳಾಲ ನಗರಸಭೆ ಸದಸ್ಯ ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಉಳ್ಳಾಲ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಳ್ಳಾಲ ನಗರಸಭೆಗೆ ಇತ್ತೀಚಿಗಷ್ಟೇ ನಡೆದ ಚುನಾವಣೆಯಲ್ಲಿ 5 ಮಂದಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿ ಜನತಾದಳದ ಅಭ್ಯರ್ಥಿಗಳು ಆಯ್ಕೆಗೊಂಡಿದ್ದರು. ಅದೇ ಕಾರಣಕ್ಕಾಗಿ ಕಾಮಗಾರಿಯನ್ನು ಸ್ಥಳಾತರಿಸಲಾಗಿದೆ ಎನ್ನಲಾಗಿದೆ.
ಆಡಳಿತ ವರ್ಗದವರ ರಾಜಕೀಯ ಗುದ್ದಾಟದಿಂದಾಗಿ ಅಲ್ಲಿನ ಜನರಿಗೆ ಮಾತ್ರ ಅನ್ಯಾಯ ಎಸಗಿದಂತಾಗಿದೆ.